ಸಿಂಧನೂರು: ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಆಗ್ರಹಿಸಿ ತಾಲ್ಲೂಕಿನ ರಾಗಲಪರ್ವಿ-ಬನ್ನಿಗನೂರು ಕ್ರಾಸ್‍ನಲ್ಲಿ ನೂರಾರು ರೈತರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿ, ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆ ಕೆಳಭಾಗದ ರೈತರು ಬೆಳೆದ ಬೆಳೆಗಳು ನೀರು ಇಲ್ಲದೆ ಒಣಗುತ್ತಿವೆ. ಈ ಬಗ್ಗೆ ಅನೇಕ ಬಾರಿ ನೀರಾವರಿ ಇಲಾಖೆಯ ಎಇಇ, ಜೆಇ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಸಮರ್ಪಕವಾಗಿ ನೀರು ಬಂದಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
‘ನಮ್ಮ ಕಾಲುವೆಗೆ ಬರಬೇಕಾದ ನೀರು ಎಲ್ಲಿಗೆ ಹೋದವು. ನೀರಾವರಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಅಮೀನಪಾಷಾ ದಿದ್ದಿಗಿ ದೂರಿದರು.
‘ಯಾಪಲಪರ್ವಿಯಿಂದ ಆಯನೂರು ಸೇರಿ ಕೆಳಭಾಗದ ಹಳ್ಳಿಗಳ ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲ. ಆದ್ದರಿಂದ ಹಳ್ಳಕ್ಕೆ ನೀರು ಬಿಡುವಂತೆ ರೈತರು ಅಧಿಕಾರಿಗಳನ್ನು ಒತ್ತಾಯ ಮಾಡಿದರೂ ಸ್ಪಂದಿಸಿಲ್ಲ. ನೀರು ಕೊಡಿ ಇಲ್ಲ ನಮಗೆ ವಿಷ ಕೊಡಿ’ ಎಂದು ತಹಶೀಲ್ದಾರ್ ಅರುಣ ಎಚ್.ದೇಸಾಯಿ ಅವರ ಬಳಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅರುಣ್ ದೇಸಾಯಿ ‘ಕುಡಿಯುವ ನೀರಿನ ಅಭಾವ ತಲೆದೊರದಂತೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಇದರ ಬಗ್ಗೆ ನೀರಾವರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒಗಳ ಜತೆ ಸಭೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಸರ್ಕಾರ ತಾಲ್ಲೂಕನ್ನು ಬರಗಾಲ ಪಿಡೀತ ಎಂದು ಘೋಷಣೆ ಮಾಡಿದೆ’ ಎಂದು ರೈತರ ಮನವೊಲಿಸಿದರು.
ಅಕ್ರಮ ನೀರಾವರಿ ತಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಇಲಾಖೆಯ ಎಇಇ ಸತ್ಯನಾರಾಯಣ ಶೆಟ್ಟಿ ಅವರಿಗೆ ರೈತರು ಒತ್ತಾಯಿಸಿದರು.
ತಹಶೀಲ್ದಾರ್ ಅವರ ಮನವಿ ಮೇರೆಗೆ ರೈತರು ರಸ್ತೆ ತಡೆ ಹೋರಾಟವನ್ನು ಕೈಬಿಟ್ಟರು.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ರಸ್ತೆ ತಡೆ ಸುಮಾರು 3 ಗಂಟೆವರೆಗೆ ನಡೆಯಿತು. ಇದರಿಂದ ರಾಯಚೂರು ಹಾಗೂ ಸಿಂಧನೂರು ರಸ್ತೆ ಮಾರ್ಗದಲ್ಲಿ ಸುಮಾರು ನಾಲ್ಕೈದು ಕಿ.ಮೀ.ವರೆಗೆ ವಾಹನಗಳು ಸಾಲು ಗಟ್ಟಿ ನಿಂತು ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು.
ಡಿವೈಎಸ್‍ಪಿ ಬಿ.ಎಸ್.ತಳವಾರ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ವೀರಾರೆಡ್ಡಿ ಎಚ್, ಶಶಿಕಾಂತ, ಇನ್‌ಸ್ಪೆಕ್ಟರ್‌ಗಳಾದ ದಾದವಲಿ, ಹುಸೇನಪ್ಪ ನಾಯಕ, ಭರತಪ್ರಕಾಶ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.
ರೈತ ಮುಖಂಡರಾದ ಹನುಪರಡ್ಡೆಪ್ಪಗೌಡ, ನಾಗರಾಜ ನಾಯಕ, ದೊಡ್ಡ ಅಮರಯ್ಯ ನಾಯಕ, ಚೌಡಪ್ಪ ನಾಯಕ, ತಿಮ್ಮಣ್ಣ ನಾಯಕ ರಾಮತ್ನಾಳ, ಶ್ರೀನಿವಾಸ ರೆಡ್ಡಿ, ಬಸನಗೌಡ ಹುಲಗುಂಚಿ, ರಾಮಣ್ಣ ಗೋನ್ವಾರ, ಚಂದ್ರಶೇಖರ, ರಾಜಶೇಖರಗೌಡ, ಭೀಮಣ್ಣ, ಧುಮತಿ ಚೌಡಪ್ಪ ನಾಯಕ, ನಾರಾಯಣರೆಡ್ಡಿ, ಮಲ್ಲಿಕಾರ್ಜುನಗೌಡ, ನಾಗಪ್ಪ ರೆಡ್ಡಿ, ಹನಮರೆಡ್ಡಿ, ನಾಗರಾಜ ನಾಯಕ, ದಿದ್ದಿಗಿ ದುರಗಪ್ಪ, ಶರಣೇಗೌಡ, ಅರಣಕುಮಾರ ಯಾಪಲಪರ್ವಿ, ಬಿ.ಎಸ್.ನಾಯಕ, ಫಕೀರಯ್ಯ ಹುಲಗುಂಚಿ, ಹುಚ್ಚಪ್ಪ, ಚನ್ನನಗೌಡ ಬನ್ನಿಗನೂರು, ಫಕೀರಯ್ಯ ಪುಲದಿನ್ನಿ, ನಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.