ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ: ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಧಕ ಹುದ್ದೆಗಳು ಖಾಲಿ

ಬಸವರಾಜ ಭೋಗಾವತಿ
Published 20 ಮೇ 2024, 5:30 IST
Last Updated 20 ಮೇ 2024, 5:30 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಬೋಧಕ–ಬೋಧಕೇತರ ಹುದ್ದೆಗಳು ಖಾಲಿ ಇರುವ ಕಾರಣ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.

ಬಡ ವಿದ್ಯಾರ್ಥಿಗಳ ಪಿಯು ವ್ಯಾಸಂಗಕ್ಕೆ ನೆರವಾಗಬೇಕಿದ್ದ ಈ ಕಾಲೇಜಿನಲ್ಲಿ ಪ್ರತಿವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಬೋಧಕರ ಕೊರತೆಯಿಂದಾಗಿ ಪರೀಕ್ಷಾ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದು, ಪ್ರತಿವರ್ಷ ಅತಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾಗುತ್ತಿದ್ದಾರೆ.

ಖಾಲಿ ಹುದ್ದೆಗಳ ಭರ್ತಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಸುಮಾರು ಐದು ದಶಕಗಳ ಇತಿಹಾಸ ಹೊಂದಿರುವ ಕಾಲೇಜು ಮುಚ್ಚುವ ಹಂತ ತಲುಪಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೋಧಕ ಹುದ್ದೆಗಳು: ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಮಂಜೂರಾದ ಒಟ್ಟು 12 ಉಪನ್ಯಾಸಕ ಹುದ್ದೆಗಳ ಪೈಕಿ 7 ಹುದ್ದೆಗಳು ಖಾಲಿ ಇವೆ. ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಕಾಯಂ ಉಪನ್ಯಾಸಕರಿಲ್ಲ. ಗಣಿತ ವಿಷಯದ ಕಾಯಂ ಉಪನ್ಯಾಸಕರನ್ನು ರಾಯಚೂರಿನ ಕಾಲೇಜಿಗೆ ವಾರದಲ್ಲಿ ಮೂರು ದಿನ ಎರವಲು ಸೇವೆಗೆ ನಿಯೋಜಿಸಲಾಗಿದೆ.

ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಆಧಾರದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅವಕಾಶವಿದ್ದರೂ, ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂಬುದು ವಿದ್ಯಾರ್ಥಿ ಮುಖಂಡರ ದೂರು.

2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಒಟ್ಟು 54 ವಿದ್ಯಾರ್ಥಿಗಳ ಪೈಕಿ 19, ವಾಣಿಜ್ಯ ವಿಭಾಗದ ಒಟ್ಟು 11 ವಿದ್ಯಾರ್ಥಿಗಳ ಪೈಕಿ ಕೇವಲ ಇಬ್ಬರು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 6 ವಿದ್ಯಾರ್ಥಿಗಳಲ್ಲಿ ಎಲ್ಲರೂ ಅನುತ್ತೀರ್ಣರಾಗಿ ಶೂನ್ಯ ಫಲಿತಾಂಶ ಪಡೆದಿದೆ.

ಬೋಧಕೇತರ ಹುದ್ದೆಗಳು ಖಾಲಿ: ಕಾಲೇಜಿಗೆ ಮಂಜೂರಾದ ಒಟ್ಟು 8 ಬೋಧಕೇತರ ಹುದ್ದೆಗಳ ಪೈಕಿ 6 ಹುದ್ದೆಗಳು ಖಾಲಿ ಇವೆ. ಕಚೇರಿ ನಿರ್ವಹಣೆಗೆ ಸಂಬಂಧಿಸಿದಂತೆ ಬೋಧಕೇತರ ನೌಕರರ ಕೆಲಸವನ್ನು ಕಾಯಂ ಉಪನ್ಯಾಸಕರು ನಿರ್ವಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಕಾಲೇಜು ನೂತನವಾಗಿ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಕಾಂಪೌಂಡ್ ಗೋಡೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಿಡಿಗೇಡಿಗಳು ಕಾಲೇಜಿನ ಕಿಟಕಿಯ ಗಾಜುಗಳನ್ನು ಒಡೆದಿದ್ದಾರೆ.

ಕಾಲೇಜಿನ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳು ಕಾಳಜಿವಹಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯ.

ಖಾಲಿ ಇರುವ ಬೋಧಕ ಬೋಧಕೇತರ ಹುದ್ದೆಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಾ.ಕುಂಟೆಪ್ಪ ಗೌರಿಪುರ ಪ್ರಾಂಶುಪಾಲ ಬಾಲಕರ ಸರ್ಕಾರಿ ಪಿಯು ಕಾಲೇಜು ಮಾನ್ವಿ
ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸಬೇಕು
ಬಿ.ಸಂತೋಷ ಹೂಗಾರ ಸಾಮಾಜಿಕ ಕಾರ್ಯಕರ್ತ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT