ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: ಸಂಚರಿಸದ ಕಸ ವಿಲೇವಾರಿ ವಾಹನ

ತುರ್ವಿಹಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯದ ಸಮಸ್ಯೆ ಉಲ್ಬಣ: ರೋಗ ಭೀತಿ
Published 22 ಜೂನ್ 2023, 6:26 IST
Last Updated 22 ಜೂನ್ 2023, 6:26 IST
ಅಕ್ಷರ ಗಾತ್ರ

ತುರ್ವಿಹಾಳ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಮಾಡದ ಕಾರಣ ಸಮಸ್ಯೆ ಹೆಚ್ಚಾಗಿದೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆ ಕಾರಣಕ್ಕೆ ಹಲವು ದಿನಗಳಿಂದ ಘನತ್ಯಾಜ್ಯ ವಿಲೇವಾರಿ ವಾಹನ ಸಂಚರಿಸುತ್ತಿಲ್ಲ. ಆದ್ದರಿಂದ ಜನರು ಮನೆಯಲ್ಲಿ ಕಸ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ವಿಹಾಳ ಪಟ್ಟಣ, ಗುಂಜಳ್ಳಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್ ಹಾಗೂ ಬಸವಣ್ಣ ಕ್ಯಾಂಪ್ ಸೇರಿ ಒಟ್ಟು 14 ವಾರ್ಡ್‌ಗಳು ಬರುತ್ತವೆ. ಘನತಾಜ್ಯ ನಿರ್ವಹಣೆ ಯೋಜನೆಯಡಿ ಕಸ ಸಂಗ್ರಹ ಮಾಡಲು ಎರಡು ಹೊಸ ಟಾಟಾ ಏಸ್ ವಾಹನ, 20 ತಳ್ಳುವ ಬಂಡಿಗಳನ್ನು ಒದಗಿಸಲಾಗಿದೆ. ಅವು ಪಂಚಾಯಿತಿ ಆವರಣದಲ್ಲಿ ನಿಂತುಕೊಂಡು ಹಲವು ವರ್ಷಗಳೇ ಕಳೆದರೂ ಆರಂಭಕ್ಕೆ ಮುಹೂರ್ತ ಕೂಡಿಬಂದಿಲ್ಲ.

ತ್ಯಾಜ್ಯ ವಿಲೇವಾರಿ ವಾಹನಗಳು ಹಾಗೂ ತಳ್ಳು ಬಂಡಿಗಳ ಖರೀದಿಗೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ಅಧಿಕಾರಿಗಳು ವಾಹನ ಓಡಿಸಲು ಚಾಲಕರಿಲ್ಲ ಎಂದು ಸಬೂಬು ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ನಿಂತಲ್ಲೇ ನಿಂತಿರುವ ವಾಹನಗಳ ಒಳಗಿನ ಭಾಗ ತುಕ್ಕು ಹಿಡಿಯುತ್ತಿದೆ. ಕೂಡಲೇ ವಾಹನಗಳು ಹಾಗೂ ತಳ್ಳು ಗಾಡಿಗಳನ್ನು ಬಳಕೆ ಮಾಡಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಮುಖಂಡ ಶಿವಪುತ್ರಪ್ಪ ಕೆಂಗೇರಿ ಒತ್ತಾಯಿಸಿದರು.

ಸಾರ್ವಜನಿಕ ಸ್ಥಳಗಳು ಹಾಗೂ ಚರಂಡಿಗಳು ಕಸದಿಂದ ತುಂಬಿವೆ. ಚರಂಡಿಯ ಹೂಳು ವಿಲೇವಾರಿ ಮಾಡದೆ ಅಲ್ಲಿಯೇ ಹಾಕಿದ ಕಾರಣ ರಸ್ತೆಗಳು ಕಸಮಯವಾಗಿವೆ.

ಮೊದಲು ಪಟ್ಟಣದ ಹೊರವಲಯದ ಸಿಂಧನೂರು ನಗರಸಭೆಗೆ ಸಂಬಂಧಿಸಿದ ಕೆರೆ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಕೆಲ ದಿನಗಳಿಂದ 15 ಕೀ.ಮೀ ದೂರದ ಊಮಲೂಟಿ ಗ್ರಾಮದ ಹೊರವಲಯದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.

15 ದಿನಗಳಿಂದ ಕಸ ವಿಲೇವಾರಿಯ ಎರಡು ಟ್ರಾಕ್ಟರ್‌ಗಳು ಸಂಚಾರ ನಿಲ್ಲಿಸಿವೆ. ಚಾಲಕರು ಸರಿಯಾಗಿ ಕೆಲಸ ಮಾಡು ವುದಿಲ್ಲ. ಕೂಡಲೇ ಬೇರೆ ಚಾಲಕರನ್ನು ನೇಮಕ ಮಾಡಿಕೊಂಡು ಕಸ ವಿಲೇವಾರಿ ಕಾರ್ಯ ಆರಂಭಿಸಬೇಕು ಎಂದು ಜನರು ಆಗ್ರಹಿಸಿದರು.

ತುರ್ವಿಹಾಳ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಸ ವಿಲೇವಾರಿ ತಳ್ಳು ಬಂಡಿಗಳನ್ನು ಇಡಲಾಗಿದೆ
ತುರ್ವಿಹಾಳ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಸ ವಿಲೇವಾರಿ ತಳ್ಳು ಬಂಡಿಗಳನ್ನು ಇಡಲಾಗಿದೆ

ಪಟ್ಟಣದ ಕಸ ವಿಲೇವಾರಿ ಕುರಿತು ಮಾಹಿತಿ ಇಲ್ಲ. ಮುಖ್ಯಾಧಿಕಾರಿಯೊಂದಿಗೆ ಮಾತನಾಡಿ ಆದಷ್ಟು ಬೇಗ ವಾಹನ ಮತ್ತು ತಳ್ಳುವ ಬಂಡಿಗಳ ಆರಂಭಕ್ಕೆ ಸೂಚಿಸುತ್ತೇನೆ

-ಅರುಣ್ ಕುಮಾರ ದೇಸಾಯಿ ಆಡಳಿತಾಧಿಕಾರಿ ಪಟ್ಟಣ ಪಂಚಾಯಿತಿ

ಕಸ ವಿಲೇವಾರಿ ಸಮಸ್ಯೆ ಇದೆ. ಶಾಸಕರೊಂದಿಗೆ ಮಾತನಾಡಿ ಚಾಲಕರನ್ನು ನೇಮಿಸಿಕೊಂಡು ಒಂದು ವಾರದಲ್ಲಿ ವಾಹನಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು

-ಅಮರೇಶಪ್ಪ ಕಿರಿಯ ಆರೋಗ್ಯ ನಿರೀಕ್ಷಕ

ಪಟ್ಟಣದಲ್ಲಿರುವ ಚರಂಡಿಗಳು ಕಸದ ಗೂಡುಗಳಾಗಿವೆ. ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ವಾಹನಗಳ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು

-ಎಂ.ಡಿ.ಅಬುತುರಾಬ್ ಖಾಜಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT