ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಮುಗಿದರೂ ನೀರಿಗೆ ಹಾಹಾಕಾರ

ದೇವದುರ್ಗ: ಕುಡಿಯುವ ನೀರಿಗೆ ಕೋಟ್ಯಂತರ ಹಣ ಸುರಿದರೂ ತಪ್ಪದ ಪರದಾಟ
Last Updated 9 ಜುಲೈ 2019, 20:06 IST
ಅಕ್ಷರ ಗಾತ್ರ

ದೇವದುರ್ಗ: ಸಂಸದ ಮತ್ತು ಶಾಸಕರ ಅನುದಾನದ ಸೇರಿದಂತೆ ಜಿಲ್ಲಾ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ತಾಲ್ಲೂಕಿನಲ್ಲಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಪ್ರತಿನಿತ್ಯ ಹತ್ತಾರು ಗ್ರಾಮಗಲ್ಲಿ ಜನರು ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ಬಗೆಹರಿದಿಲ್ಲ.

ತಾಲ್ಲೂಕಿನ 186 ಗ್ರಾಮಗಳ ಪೈಕಿ ಸುಮಾರು ಅರ್ಧಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಜಿಲ್ಲಾ ಪಂಚಾಯಿತಿ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಶೇ 70ರಷ್ಟು ಗ್ರಾಮಗಳು ಕೊಳವೆಬಾವಿ ನೀರಿನ ಮೇಲೆ ಅವಲಂಬನೆ ಆಗಿವೆ. ನಾರಾಯಣಪುರ ಬಲದಂಡೆ ಕಾಲುವೆ ಬಂದ ನಂತರ ಕೆಲವು ಗ್ರಾಮಗಳ ಅಂತರ್ಜಲ ಹೆಚ್ಚಳ ಕಂಡು ಬಂದರೂ ಅದು ಬೇಸಿಗೆ ಬರುವಷ್ಟರಲ್ಲಿ ಕಡಿಮೆಯಾಗುತ್ತದೆ.

ಮಳೆಯ ಅಭಾವದಿಂದಾಗಿ ಬೇಸಿಗೆ ಕಳೆದರೂ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ. ತುರ್ತು ನಿರ್ವಹಣೆಗೆಂದು ತಹಶೀಲ್ದಾರ್ ಖಾತೆಗೆ ಬಿಡುಗಡೆಯಾದ ₹5 ಲಕ್ಷ ಅನುದಾನದಲ್ಲಿ ಕರಿಮರಡಿ ತಾಂಡಾ, ಭಾಗ್ಯಮ್ಮ ದೊಡ್ಡಿ, ಪಲಕನಮರಡಿ, ಮದರಕಲ್ ಮತ್ತು ಮುಕ್ಕಲಗುಡ್ಡ ಗ್ರಾಮದಲ್ಲಿನ ಜನರಿಗೆ ಇಂದಿಗೂ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡ ಪ್ರಯುಕ್ತ ಖಾಸಗಿ ಕೊಳವೆಬಾವಿಗಳ ಮೂಲಕ ಹಣ ನೀಡಿ ನೀರು ಸರಬರಾಜು ಮಾಡಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ತಿಳಿಸಿದ್ದಾರೆ.

ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕಾಗಿಯೇ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿ ಕಾಲುವೆ ನೀರು ಹರಿಯುವ ಮಾರ್ಗದ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲು ಹೇಳಲಾಗಿದ್ದರೂ ಅಧಿಕಾರಿಗಳು ಗಮನಹರಿಸದ ಕಾರಣ ಬಹುತೇಕ ಕೆರೆಗಳು ಬರಿದಾಗಿವೆ.

ದೇವದುರ್ಗ ತಾಲ್ಲೂಕಿನಲ್ಲಿ ಸುಮಾರು 73 ಕಿ.ಮೀ ಹರಿಯುವ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿಯೇ ಜನರು ಹನಿ ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ಇದ್ದರೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ.

ನದಿತೀರದ ಕರ್ಕಹಳ್ಳಿ, ದೊಂಡಂಬಳಿ, ಪರ್ತಪುರ, ಯಾಟಗಲ್, ಅಂಚೆಸೂಗೂರು, ಅಂಜಳ, ಬಾಗೂರು ಸೇರಿದಂತೆ ಇತರ ಗ್ರಾಮಗಳ ಜನರು ಬೆಳಗಾದರೆ ನದಿಗೆ ಇಳಿದು ನೀರು ತರಬೇಕಾದ ಪರಿಸ್ಥಿತಿ ಇದೆ. ಕೆಲವು ಗ್ರಾಮಗಳಲ್ಲಿ ಹತ್ತಾರು ಕಿ.ಮೀ ದೂರ ನೀರನ್ನು ಹುಡುಕಿಕೊಂಡು ಹೋಗಿ ತರಬೇಕಾಗಿದೆ.

ತಾಲ್ಲೂಕಿನ ಭೋಮನಗುಂಡ, ಮಲ್ಲೇದೇವರಗುಡ್ಡ ಮತ್ತು ಕ್ಯಾದಿಗೇರಾ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಜನರಿಗೆ ಬೋರ್ವೆಲ್ ನೀರು ಅವಲಂಬನೆಯಾಗಿದೆ. ಅಡಕಲಗುಡ್ಡ ಗ್ರಾಮದಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದೆ. ಮುಂಡರಗಿ, ಗಾಣಧಾಳ, ವಂದಲಿ, ಜೇರಬಂಡಿ ಮತ್ತು ಪಲಕನಮರಡಿ ಗ್ರಾಪಂ ವ್ಯಾಪ್ತಿಯಲ್ಲಿನ ಸುಮಾರು 12 ಗ್ರಾಮಗಳಲ್ಲಿ ಪ್ಲೋರೈಡ್ ಮಿಶ್ರಿತ ಇರುವುದು ಈಗಾಗಲೇ ದೃಢಪಟ್ಟಿದೆ. ಪ್ರತಿನಿತ್ಯ ಪ್ಲೋರೈಡ್ ಮಿಶ್ರಿತ ನೀರು ಕುಡಿಯುವುದರಿಂದ ದೇವತಗಲ್ ಮತ್ತು ಪಲಕನಮರಡಿ ಗ್ರಾಮಗಳ ಜನರು ಹಲವು ರೋಗದಿಂದ ಬಳಲುತ್ತಿರುವುದು ಕಂಡು ಬಂದಿದೆ.

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದರೂ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿವೆ. ಗ್ರಾಮದ ಜನರಿಗೆ ಅದರ ಲಾಭ ಇಲ್ಲದಂತಾಗಿದೆ ಎಂದು ಚಿಕ್ಕಬುದೂರು ಗ್ರಾಮದ ಸಂಗಯ್ಯ ಸ್ವಾಮಿ ಆರೋಪಿಸಿದ್ದಾರೆ.

ಚಿಕ್ಕಬೂದೂರು ಮತ್ತು ಸಲಿಕ್ಯಾಪುರ ಗ್ರಾಮಗಳ ಜನರು ಹತ್ತಾರು ವರ್ಷದಿಂದ ಹಳ್ಳದ ನೀರನ್ನೇ ಕುಡಿಯುತ್ತಿದ್ದಾರೆ. ಗ್ರಾಮಸ್ಥರು ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದ್ದರು. ಕೃಷ್ಣಾ ನದಿ ತೀರದ ಯಾಟಗಲ್ ಗ್ರಾಮದಿಂದ ಕುಡಿಯುವ ನೀರಿನ ಸಮಸ್ಯೆ ಇರುವಂಥ ಸುಮಾರು 12 ಗ್ರಾಮಗಳಿಗೆ ನದಿ ನೀರನ್ನು ನೀಡಲು 1996ರಲ್ಲಿ ಯೋಜನೆಯನ್ನು ರೂಪಿಸಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ 20 ವರ್ಷ ಕಳೆದರೂ ನೀರು ಹರಿಸಲು ಸಾಧ್ಯವಾಗಿಲ್ಲ.

ಭೂಸೇನಾ ನಿಗಮಕ್ಕೆ ಕಾಮಗಾರಿ ನೀಡಲಾಗಿತ್ತು. ಯೋಜನೆಯ ಪ್ರಕಾರ ₹1 ಕೋಟಿಯಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಈಗ ₹8 ಕೋಟಿ
ಖರ್ಚು ಮಾಡಿದರೂ ಅಪೂರ್ಣ ಗೊಂಡಿದೆ.

ಜಲನಿರ್ಮಲ ಯೋಜನೆ ಅಡಿಯಲ್ಲಿ ವಿವಿಧ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸಿ ಶಾಶ್ವತ ಕುಡಿಯುವ ಯೋಜನೆಗೆಗಾಗಿ ಸರ್ಕಾರ ಕೋಟಿಗಟ್ಟಲೇ ಹಣ ಮಂಜೂರು ಮಾಡಿದರೂ ಟೆಂಡರ್ ಪಡೆದ ಗುತ್ತಿಗೆದಾರರು ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.

ರಾಮದುರ್ಗ, ಜಿನ್ನಾಪುರ, ಸುಂಕೇಶ್ವರಹಾಳ, ಹದ್ದಿನಾಳ, ಕಾಕರಗಲ್ ಮತ್ತು ಅಮರಾಪುರ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿಗಾಗಿ ಕಳೆದ ಐದು ವರ್ಷಗಳ ಹಿಂದೆಯೇ ಜಲನಿರ್ಮಲ ಯೋಜನೆ ಅಡಿ ಕೆರೆ ನಿರ್ಮಿಸಲಾಗಿದ್ದರೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ನೀರು ಸಿಗುತ್ತಿಲ್ಲ ಎಂದು ರಾಮದುರ್ಗ
ಗ್ರಾಮದ ನಿವಾಸಿ ಗಂಗಾಧರ ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ನೀರಿಗಾಗಿ 25 ಕಿ.ಮೀ ದೂರದ ಗೂಗಲ್ ಗ್ರಾಮದ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ₹50 ಕೋಟಿ ಖರ್ಚು ಮಾಡಿ ನೀರು ಹರಿಸಿದರೂ ಜನರು ಪ್ರತಿನಿತ್ಯ ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಗಡದಿನ್ನಿ, ಹೆಗಡದಿನ್ನಿ, ಯರಮರಸ ಮತ್ತು ಮರಕಂದಿನ್ನಿಗ್ರಾಮದಲ್ಲಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಕೆರೆಗಳನ್ನು ನಿರ್ಮಿಸಿ, ತುಂಗಭದ್ರ ಎಡದಂಡೆ ಕಾಲುವೆಗೆ ಹರಿಯುವ ನೀರಿನಿಂದ ಸಂಗ್ರಹಿಸಲಾಗುತ್ತದೆ. ಕಾಲುವೆಗೆ ನೀರು ಸ್ಥಗಿತಗೊಂಡ ನಂತರ ನೀರಿನ ಸಮಸ್ಯೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT