ಮಂಗಳವಾರ, ಮೇ 11, 2021
24 °C
ವಿದ್ಯುತ್‌ ಸಮಸ್ಯೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನ

ಕವಿತಾಳ: ನೀರಿನ ಸಮಸ್ಯೆ ಉಲ್ಬಣ

ಮಂಜುನಾಥ ಎನ್ ಬಳ್ಳಾರಿ Updated:

ಅಕ್ಷರ ಗಾತ್ರ : | |

Prajavani

ಕವಿತಾಳ: ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ನಿರಂತರವಾಗಿದ್ದು, ಬೇಸಿಗೆಯಲ್ಲಿ ತೀವ್ರವಾಗಿದೆ.

ನೀರಿನ ಸಮಸ್ಯೆಯಿಂದ ಬೇಸತ್ತ ಮಹಿಳೆಯರು ಈಚೆಗೆ ಖಾಲಿ ಕೊಡಗಳೊಂದಿಗೆ ಪಟ್ಟಣ ಪಂಚಾಯಿತಿಗೆ ಆಗಮಿಸಿ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀಪದ ಪರಸಾಪುರ ಸೇರಿದಂತೆ ಪಟ್ಟಣದ 14 ವಾರ್ಡ್‍ ಗಳಿಗೆ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಸರಬರಾಜು ಮಾಡಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಂದಾಜು ₹8.76 ಕೋಟಿ ವೆಚ್ಚದಲ್ಲಿ ಲಕ್ಷ್ಮೀ ನಾರಾಯಣಪ್ಪ ಕ್ಯಾಂಪ್‍ ಹತ್ತಿರ ಕೆರೆ ನಿರ್ಮಿಸಿದ್ದರೂ ವಿದ್ಯುತ್‍ ಸಮಸ್ಯೆ ಮತ್ತು ನಿರ್ವಹಣೆ ಕೊರತೆಯಿಂದ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ನೀರಿನ ಸಮಸ್ಯೆ ಕಾಡುತ್ತಿದೆ.

ಪಟ್ಟಣದಲ್ಲಿ 6 ಮೇಲ್ತೊಟ್ಟಿಗಳು ಮತ್ತು ಒಂದು ನೆಲ ಮಟ್ಟದ ನೀರು ಸಂಗ್ರಹ ತೊಟ್ಟಿ (ಸಂಪ್‍) ಇದ್ದಾಗ್ಯೂ ಬಹುತೇಕ ವಾರ್ಡ್‍ ಗಳಿಗೆ ಸಮಪರ್ಕ ನೀರು ಸರಬರಾಜು ಆಗುತ್ತಿಲ್ಲ. ಕೆಲವು ವಾರ್ಡ್‍ ಗಳಿಗೆ ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.

‘ಪ್ರತಿದಿನ ನೀರಿಗಾಗಿ ಓಣಿಯಿಂದ ಓಣಿಗೆ ಅಲೆಯುವಂತಾಗಿದೆ ಸಮಪರ್ಕ ನೀರು ಸಿಗದೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ, ಬಳಕೆ ನೀರಿಗಾಗಿ ಪರದಾಟ ತಪ್ಪಿಲ್ಲ’ ಎಂದು ಹುಸೇನ್‍ ಬೀ ಮತ್ತು ಮೆಹಬೂಬ್‍ ಬೀ ಸಂಕಷ್ಟ ಹಂಚಿಕೊಂಡರು.

‘ಕೆರೆ ನೀರು ಮಲೀನವಾಗಿದ್ದು ಕೊಳೆತ ವಾಸನೆಯುಕ್ತ ನೀರು ಬರುತ್ತಿದೆ ಕೆರೆ ನೀರನ್ನು ಹಾಗೆಯೇ ಕುಡಿದಲ್ಲಿ ವಾಕರಿಕೆ ಬರುತ್ತದೆ’ ಎಂದು ಸತ್ಯವತಿ ದೂರಿದರು.

‘ಕೆರೆಯ ನೀರನ್ನು ಬಳಕೆಗೆ ಯೋಗ್ಯವಾಗುವ ನಿಟ್ಟಿನಲ್ಲಿ ಕಸ ಕಡ್ಡಿ ತೆಗೆಯುವುದು ಸೇರಿದಂತೆ ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ, ದಿನದ 18 ಗಂಟೆಗಳ ಕಾಲ ನೀರು ಪೂರೈಸಲು ವ್ಯವಸ್ಥೆ ಹೊಂದಿದ್ದು ವಿದ್ಯುತ್‍ ಸಮಸ್ಯೆಯಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ’ ಎಂದು ಕೆರೆಯ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರ ಪ್ರತಿನಿಧಿ ದೇವೆಂದ್ರಪ್ಪ ಹೇಳಿದರು. ‘ಕೆರೆಗೆ ಪ್ರತ್ಯೇಕ ವಿದ್ಯುತ್‍ ಸಂಪರ್ಕ ವ್ಯವಸ್ಥೆ ಕಲ್ಪಿಸದ ಕಾರಣ ನೀರು ಸರಬರಾಜು ಮಾಡುವಲ್ಲಿ ಪದೇ ಪದೇ ವ್ಯತ್ತಯವಾಗುತ್ತಿದೆ ಮತ್ತು ಮೆಲ್ತೊಟ್ಟಿಗಳನ್ನು 30 ವರ್ಷಗಳ ಹಿಂದೆ ನಿರ್ಮಿಸಿದ್ದು ಅವುಗಳ ಸಂಗ್ರಹ ಸಾಮರ್ಥ್ಯ ಕಡಿಮೆಯಿದೆ, ಪ್ರಸ್ತುತ ಜನಸಂಖ್ಯೆ ಆಧರಿಸಿ ದೊಡ್ಡ ಗಾತ್ರದ ಮೆಲ್ತೊಟ್ಟಿಗಳನ್ನು ನಿರ್ಮಿಸುವುದು ಅಗತ್ಯ’ ಎಂದು ಪಟ್ಟಣ ಪಂಚಾಯಿತಿ ಸದಸ್ಯರಾದ ಗಂಗಪ್ಪ ದಿನ್ನಿ ಮತ್ತು ಎಚ್.ಬಸವರಾಜ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.