ಭಾನುವಾರ, ಸೆಪ್ಟೆಂಬರ್ 26, 2021
27 °C
ಪದವಿ ಪೂರ್ವ ಶಿಕ್ಷಣ ನೀಡಲು ಜಿಲ್ಲೆಯಲ್ಲಿ ಸಜ್ಜಾದ 174 ಕಾಲೇಜು

ಉನ್ನತ ಶಿಕ್ಷಣಕ್ಕೆ ಸೂಕ್ತ ಮಾರ್ಗ

ಪಿ.ಹನುಮಂತು Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರೌಢ ಶಿಕ್ಷಣದ ನಂತರದ ಹಂತ ಪದವಿ ಪೂರ್ವ ಶಿಕ್ಷಣವಾಗಿದೆ. ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯಬೇಕಾದರೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಪದವಿ ಪೂರ್ವ ಶಿಕ್ಷಣ ಪಡೆಯಬೇಕು. ಈ ಶಿಕ್ಷಣ ನೀಡಲು ಜಿಲ್ಲೆಯಲ್ಲಿ 174 ಕಾಲೇಜುಗಳು ಸಜ್ಜಾಗಿವೆ.

ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶಿಕ್ಷಣ ನೀಡಲು ಜಿಲ್ಲೆಯಲ್ಲಿ 47 ಸರ್ಕಾರಿ ಕಾಲೇಜುಗಳಿವೆ. ಎಂಟು ಅನುದಾನಿತ ಕಾಲೇಜುಗಳಿದ್ದು, 119 ಖಾಸಗಿ ಕಾಲೇಜುಗಳು ಇವೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಹವಣಿಸುತ್ತಿದ್ದಾರೆ.

ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗಕ್ಕೆ ಮೊದಲ ಆದ್ಯತೆಯಿದ್ದು, ನಂತರ ವಾಣಿಜ್ಯ ವಿಭಾಗಕ್ಕೆ ತದನಂತರ ಕಲಾ ವಿಭಾಗಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಎರಡು ಭಾಷೆ ಹಾಗೂ ನಾಲ್ಕು ಐಚ್ಛಿಕ ವಿಷಯಗಳು ಸೇರಿ ಆರು ವಿಷಯಗಳನ್ನು ಪದವಿ ಪೂರ್ವ ಶಿಕ್ಷಣದಲ್ಲಿ ಅಧ್ಯಯನ ನಡೆಸಬೇಕಿದೆ.

ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್‌ ಹಾಗೂ ಫ್ರೆಂಚ್‌ ಒಟ್ಟು 12 ಭಾಷೆಯ ವಿಷಯಗಳಿವೆ. ಇವುಗಳಲ್ಲಿ ಎರಡು ಭಾಷೆಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅಧ್ಯಯನ ಮಾಡಬೇಕು.

ಐಚ್ಛಿಕ ವಿಷಯಗಳಲ್ಲಿ 20ಕ್ಕೂ ಅಧಿಕ ವಿಷಯಗಳಲ್ಲಿ ಇವುಗಳಲ್ಲಿ ನಾಲ್ಕು ವಿಷಯಗಳ ವಿವಿಧ ಸಂಯೋಜನೆಗಳನ್ನು ಮಾಡಲಾಗಿದೆ. ಕಲಾ ವಿಭಾಗದಲ್ಲಿ 34 ಸಂಯೋಜನೆಗಳಿವೆ. ವಾಣಿಜ್ಯದಲ್ಲಿ ಎಂಟು ಹಾಗೂ ವಿಜ್ಞಾನ ವಿಭಾಗದಲ್ಲಿ ಆರು ಸಂಯೋಜನೆಗಳಿವೆ. ಇವುಗಳಲ್ಲಿ ಯಾವುದಾದರೂ ಒಂದು ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ ಅಥವಾ ಗಣಕ ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಬೇಡಿಕೆಯಿದೆ. ಅದರಂತೆ ವಾಣಿಜ್ಯ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಅಥವಾ ಭೂಗೋಳ ಶಾಸ್ತ್ರಕ್ಕೆ ಹಾಗೂ ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಿಗೆ ಬೇಡಿಕೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು