ಭಾನುವಾರ, ಮೇ 29, 2022
22 °C

ಕಟ್ಟುನಿಟ್ಟಾದ ವಾರಾಂತ್ಯ ಕರ್ಪ್ಯೂ ಜಾರಿ, ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಾದ್ಯಂತ ಪೊಲೀಸರು ಭಾನುವಾರ, ಕಟ್ಟುನಿಟ್ಟಿನಿಂದ ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಿದ್ದಲ್ಲದೆ, ಅನಗತ್ಯ ಸಂಚರಿಸುವವರಿಗೆ ಮತ್ತು ಮಾಸ್ಕ್‌ ಇಲ್ಲದೆ ಸಂಚರಿಸುವವರಿಗೆ ದಂಡ ವಿಧಿಸಿ ತಿಳಿವಳಿಕೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆಯು ವ್ಯಾಪಕವಾಗಿ ಹಬ್ಬುತ್ತಿದ್ದು, ಯಾವುದೇ ಕಾರಣಕ್ಕೂ ಮಾಸ್ಕ್‌ ಧರಿಸದೆ ಮನೆಗಳಿಂದ ಹೊರಬರಬಾರದು. ತುರ್ತು ಕೆಲಸಕ್ಕಾಗಿ ಮಾತ್ರ ಮನೆಯಿಂದ ಹೊರಬರಬೇಕು. ಮಾಡಿರುವ ತಪ್ಪಿಗೆ ದಂಡ ಕಟ್ಟಲೇ ಬೇಕು ಎಂದು ಅನಗತ್ಯ ಸಂಚಾರ ಮಾಡುವವರಿಗೆ ರಸ್ತೆಯಲ್ಲೇ ಪಾಠ ಮಾಡುತ್ತಿರುವುದು ಸಾಮಾನ್ಯವಾಗಿತ್ತು.

ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು, ಕೊತ್ತದೊಡ್ಡಿ, ಸಿಂಗನೋಡಿ, ಶಕ್ತಿನಗರ, ಸಿಂಧನೂರು ತಾಲ್ಲೂಕಿನ ದಢೇಸುಗೂರು, ಲಿಂಗಸುಗೂರು ತಾಲ್ಲೂಕಿನ ರೋಡಲಬಂಡ, ಬೆಳ್ಳಿಹಾಳ, ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಜ್‌ ಹಾಗೂ ಹೂವಿನಹೆಡಗಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ಪೊಲೀಸರು ನಿಗಾ ವಹಿಸಿದ್ದರು. ಹೊರಗಿನಿಂದ ಬರುವವರನ್ನು ವಿಚಾರಿಸಿಕೊಂಡು ಮುಂದೆ ಸಂಚರಿಸುವುದಕ್ಕೆ ಅವಕಾಶ ನೀಡಿದರು. ಮಾಸ್ಕ್‌ ಧರಿಸದವರಿಗೆ ಬಿಸಿ ಮುಟ್ಟಿಸಿದರು.

ಊರಿಂದ ಊರಿಗೆ ಪ್ರಯಾಣಿಸುವುದಕ್ಕೆ ಅವಕಾಶ ನೀಡಿದ್ದರೂ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕೆಲವೇ ಪ್ರಯಾಣಿಕರಿದ್ದರು. ಎರಡು ಲಸಿಕೆ ಪಡೆದಿರುವುದನ್ನು ಖಚಿತ ಮಾಡಿಕೊಂಡು ಬಸ್‌ಗಳಲ್ಲಿ ಸಂಚರಿಸುವುದಕ್ಕೆ ಅವಕಾಶ ನೀಡಲಾಯಿತು. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಬಸ್‌ಗಳನ್ನು ಹೊರಬಿಡಲಾಯಿತು. ಎಂದಿನಂತೆ ಸರ್ಕಾರಿ ಬಸ್‌ಗಳು ಸಂಚರಿಸಲಿಲ್ಲ. ಬಸ್‌ ನಿಲ್ದಾಣವು ಬಹುತೇಕ ಬಿಕೋ ಎನ್ನುತ್ತಿತ್ತು. ಸಂಜೆಯಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರು ಬಸ್‌ ನಿಲ್ದಾಣದತ್ತ ಬರುತ್ತಿರುವುದು ಕಂಡುಬಂತು.

ಆಹಾರ ಮಳಿಗೆಗಳು, ತರಕಾರಿ, ಹಣ್ಣು, ಎಳನೀರು, ಔಷಧ ಅಂಗಡಿಗಳು, ಕಿರಾಣಿ ಅಂಗಡಿಗಳು, ಮಾಂಸದ ಅಂಗಡಿಗಳು ತೆರೆದುಕೊಂಡಿದ್ದವು. ಅಗತ್ಯ ವಸ್ತುಗಳ ಖರೀದಿಗಾಗಿ ಜನರ ಓಡಾಟ ಬೆಳಗಿನ ಜಾವ ಹೆಚ್ಚಾಗಿತ್ತು. ಮಧ್ಯಾಹ್ನ ಬಹುತೇಕ ರಸ್ತೆಗಳೆಲ್ಲ ಖಾಲಿಖಾಲಿಯಾಗಿದ್ದವು. ಆದರೆ, ರಾತ್ರಿಯಾಗುತ್ತಿದ್ದಂತೆ ಜನರ ಓಡಾಟವು ಶುರುವಾಗಿತ್ತು. ಆದರೆ, ಪೊಲೀಸರು ಗುರುತಿನ ಕಾರ್ಡ್‌ಗಳನ್ನು ಪರಿಶೀಲಿಸಿದರು.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ಸ್ವಯಂ ಮನೆಗಳಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಆದರೆ, ಬಡಾವಣೆಗಳಲ್ಲಿ ಮಾಸ್ಕ್‌ ಇಲ್ಲದೆ ಸಂಚರಿಸುವುದು ಸಾಮಾನ್ಯವಾಗಿದೆ. ಪೊಲೀಸರು ಪ್ರಮುಖ ಸರ್ಕಲ್‌ಗಳಲ್ಲಿ ಮಾತ್ರ ನಿಗಾ ವಹಿಸಿದ್ದಾರೆ.

ಮಂತ್ರಾಲಯ ಮಾರ್ಗದಲ್ಲಿರುವ ನವೋದಯ ಕಾಲೇಜು ಬಳಿ ಮಾಸ್ಕ್‌ ಧರಿಸದೆ ಬರುವವರಿಗೆ ದಂಡ ವಿಧಿಸುವುದು ಎಂದಿನಂತೆ ಜೋರಾಗಿತ್ತು. ವಿವಿಧ ಕೆಲಸದ ಒತ್ತಡದಲ್ಲಿ ಬರುತ್ತಿದ್ದ ಗ್ರಾಮೀಣ ಜನರೇ ಅತಿಹೆಚ್ಚು ದಂಡಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು