ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿಹೋದ ಯುವಕ; ಮತ್ತೊಬ್ಬನ ರಕ್ಷಣೆ

ಮಸ್ಕಿ ಜಲಾಶಯದಿಂದ ಹಳ್ಳಕ್ಕೆ ಹರಿದ ನೀರು: ಹೆಚ್ಚಿದ ಪ್ರವಾಹ
Last Updated 12 ಅಕ್ಟೋಬರ್ 2020, 7:57 IST
ಅಕ್ಷರ ಗಾತ್ರ

ಮಸ್ಕಿ: ಮಸ್ಕಿ ಜಲಾಶಯದಿಂದ ಹೆಚ್ಚಿನ ನೀರು ಹಳ್ಳಕ್ಕೆ ಬಿಟ್ಟಿದ್ದರಿಂದ ಮಸ್ಕಿ ಹಳ್ಳದಲ್ಲಿ ಪ್ರವಾಹಕ್ಕೆ ಸಿಲುಕಿದ ಪರಿಣಾಮ ಯುವಕನೊಬ್ಬ ಕೊಚ್ಚಿಹೋಗಿದ್ದು, ಮತ್ತೊಬ್ಬ ಯುವಕನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಬೆಳಿಗ್ಗೆ ಪಟ್ಟಣದಲ್ಲಿ ನಡೆದಿದೆ.

ಅವರು ಬಹಿರ್ದೇಸೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಹಳ್ಳದಲ್ಲಿ ಪ್ರವಾಹ ಹೆಚ್ಚಾದ ಕೂಡಲೇ ದಾಟಲು ಆಗದೆ ನಡುಗಡೆಯ ಎರಡು ಪ್ರತ್ಯೇಕ ಬಂಡೆಗಳಲ್ಲಿ ಮೇಲೆ ಯುವಕರು ರಕ್ಷಣೆ ಪಡೆದಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಾಲ್ಲೂಕು ಆಡಳಿತ ಇಬ್ಬರು ಯುವಕರನ್ನು ರಕ್ಷಿಸಲು ಲಿಂಗಸುಗೂರಿನ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು.

ಹಳ್ಳದಲ್ಲಿ ಕಾರ್ಯಚರಣೆ ನಡೆಸಿದ ಆಗ್ನಿಶಾಮಕ ಸಿಬ್ಬಂದಿ ಅಪಾಯದಲ್ಲಿದ್ದ ಚನ್ನಬಸವ (35) ಎಂಬ ಯುವಕನ ರಕ್ಷಣೆಗೆ ಮುಂದಾಯಿತು.

ಸ್ಥಳೀಯ ಹೋಂ ಗಾರ್ಡ್ ಲಕ್ಷ್ಮಣ ಹಾಗೂ ಆಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಚನ್ನಬಸವ ಅವರನ್ನು ದಡಕ್ಕೆ ಕರೆ ತರುವ ಪ್ರಯತ್ನ ಮಾಡಿದರು. ಹಳ್ಳದಲ್ಲಿ ಪ್ರವಾಹ ಹೆಚ್ಚಿದ್ದ ಕಾರಣ ಅರ್ಧಕ್ಕೆ ಬರುತ್ತಿದ್ದಂತೆ ಹಗ್ಗ ತುಂಡಾಯಿತು. ರಕ್ಷಣ ಸಿಬ್ಬಂದಿ ಹಾಗೂ ನಡುಗಡೆಯಲ್ಲಿ ಸಿಲುಕಿ ಹಾಕಿಕೊಂಡಿದ್ದ ಚನ್ನಬಸವ ಸೇರಿ ನಾಲ್ವರು ನೀರಿನಲ್ಲಿ ಕೊಚ್ಚಿಹೋದರು. ಕಿ.ಮೀ., ದೂರ ಕೊಚ್ಚಿ ಹೋದ ಮೂವರು ರಕ್ಷಣಾ ಸಿಬ್ಬಂದಿ ಹಳ್ಳದಲ್ಲಿನ ಜಾಲಿ ಗಿಡಗಳ ನಡುವೆ ಸಿಲಿಕಿದರು. ಆಗ ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ಮೂವರನ್ನು ರಕ್ಷಿಸಿ ದಡಕ್ಕೆ ಕರೆ ತಂದರು. ಈ ಸಂದರ್ಭದಲ್ಲಿ ಚನ್ನಬಸವ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಹುಡುಕಾಟ ನಡೆದಿದೆ.

ಮತ್ತೊಂದು ಬಂಡೆ ಮೇಲೆ ನಿಂತಿದ್ದ ಜಲೀಲ (32) ಎಂಬ ಯುವಕನನ್ನು ರಕ್ಷಣಾ ಸಿಬ್ಬಂದಿ ಕ್ರೇನ್ ಯಂತ್ರದ ಮೂಲಕ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣೆಯಾದ ಯುವಕ ಜಲೀಲ ಅವರನ್ನು ಅಂಬುಲೈನ್ ವಾಹನದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಡಿವೈಎಸ್ ಪಿ ಹುಲ್ಲೂರು, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸರ್ಕಲ್ ಇನ್‌ಸ್ಪೆಕ್ಟರ್ ದೀಪಕ್ ಬೂಸರೆಡ್ಡಿ, ಸಬ್ ಇನ್‌ಸ್ಪೆಕ್ಟರ್ ಸಣ್ಣ ವೀರೇಶ ಸೇರಿದಂತೆ ಅನೇಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಅಕ್ರಂದನ: ಹಳ್ಳದ ಬಂಡೆಯ ಮೇಲೆ ಮೂರು ತಾಸು ಜೀವ ಉಳಿಸಿಕೊಂಡು ಕುಳಿತಿದ್ದ ಚನ್ನಬಸವ ಕೊನೆಗೂ ಸಾವಿರಾರು ಜನರ ಹಾಗೂ ಕುಟುಂಬಸ್ಥರ ಕಣ್ಣು ಮುಂದೆಯೇ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದನ್ನು ನೋಡಿ ಕುಟುಂಬದ ಸದಸ್ಯರ ಅಕ್ರಂದನ ಮನ ಕುಲುಕುವಂತೆ ಇತ್ತು.

ಜಲೀಲ್ ಅವರನ್ನು ಕಾಪಾಡಿದಂತೆ ಚನ್ನಬಸವನನ್ನು ಕ್ರೇನ್ ಸಹಾಯದಿಂದ ಕಾಪಾಡಬೇಕಾಗಿತ್ತು. ಆದರೆ, ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಮಾಡಿದೆ ಎಂದು ಚನಬಸವವ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT