ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಟ್ಯಾಂಕ್‌ನ ನಳಗಳೇ ಮಾಯ

ಜಹೀರಾಬಾದ್‌ ಶಾಲೆ, ಕಾಲೇಜಿಗೆ ಪುಂಡರ ಕಾಟ
Last Updated 20 ಫೆಬ್ರುವರಿ 2017, 5:54 IST
ಅಕ್ಷರ ಗಾತ್ರ

ರಾಯಚೂರು: ನಗರದ ಜಹೀರಾಬಾದ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಸಮುಚ್ಚಯದಲ್ಲಿ ಕುಡಿಯುವ ನೀರಿನ ಸೌಕರ್ಯ ಇದ್ದರೂ ಪುಂಡ, ಪೋಕರಿಗಳು ಕುಡಿಯುವ ನೀರಿನ ಟ್ಯಾಂಕ್‌ನ ನಳಗಳನ್ನು ಮುರಿದು ಹಾಕುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

ಈ ಸಮುಚ್ಚಯದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ 416, ಪ್ರೌಢಶಾಲೆ 276 ಮತ್ತು ಕಾಲೇಜಿನ 75 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜೊತೆಗೆ ಶಿಕ್ಷಕರು ಮತ್ತು ಬೋಧಕೇತರ ವರ್ಗದವರು ಇದ್ದಾರೆ. ಇವರೆಲ್ಲರಿಗೂ ಬಿಸಿಯೂಟ ಕೋಣೆಯಲ್ಲಿರುವ ನಳವೇ ಕುಡಿಯುವ ನೀರನ್ನು ಒದಗಿಸಬೇಕು. ಜತೆಗೆ ಬಿಸಿಯೂಟಕ್ಕೂ ಇದನ್ನೆ ಬಳಸಬೇಕು. ಪ್ರೌಢಶಾಲೆಯ ಕೋಣೆಯ ಪಕ್ಕ ಬೃಹತ್‌ ಗಾತ್ರದ ನೀರಿನ ಟ್ಯಾಂಕ್‌ ಇದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಶಾಲೆಯ ಸಮಸ್ಯೆಗಳನ್ನು ಬಗೆಹರಿಸಬೇಕಾದ ಎಸ್‌ಡಿಎಂಸಿ ಕೂಡ ರಚನೆ ಆಗಿಲ್ಲ.

ಈ ಸಮುಚ್ಚಯದಲ್ಲಿ ಶೌಚಾಲಯವೇನೂ ಹೆಸರಿಗಿದೆ. ಆದರೆ ಅದಕ್ಕೆ ಸೂರಿಲ್ಲ. ಶಿಥಿಲಗೊಂಡು ಮಣ್ಣಗುಡ್ಡೆಯಿಂದ ತುಂಬಿ, ಗಬ್ಬುನಾರುತ್ತಿದೆ. ಹಾಗಾಗಿ ಪದವಿಪೂರ್ವ ಕಾಲೇಜಿನ ಪ್ರಯೋಗಾಲಯದ ಮಗ್ಗುಲಿನ ಮೂಲೆಯ ಖಾಲಿ ಜಾಗದಲ್ಲಿ ಮೂತ್ರವಿಸರ್ಜನೆ ಮಾಡಬೇಕು. ಇದರಿಂದ ಪ್ರಯೋಗಾಲಯ ಮತ್ತು ಅಕ್ಕಪಕ್ಕದ ತರಗತಿಗಳಿಗೆ ಗಬ್ಬುವಾಸನೆ ಹಡರುತ್ತದೆ.

ಶಾಲೆಯ ಆವರಣದಲ್ಲಿ ಹಂದಿಗಳ ಕಾಟ ಇರುವುದರಿಂದ ಮಕ್ಕಳಿಗೆ ಅವುಗಳನ್ನು ಓಡುಸುವುದು ಒಂದು ಕಾಯಕವಾಗಿದೆ. ಪ್ರಾಥಮಿಕ ಶಾಲೆಯ 32 ಕೋಣೆಗಳಲ್ಲಿ ನಾಲ್ಕೈದು ಕೋಣೆಗಳ ಗೋಡೆಗಳು ಬಿರುಕು ಬಿಟ್ಟಿವೆ. ತಾರಸಿ ಗಾರೆ ಉದುರಿದ ಕೋಣೆಯನ್ನು ಬಳಕೆ ಮಾಡುತ್ತಿಲ್ಲ. ಬಿಸಿಯೂಟ ಕೋಣೆಯ ಛಾವಣಿಯ ಪರಿಸ್ಥಿತಿಯೂ ಇದೆ ರೀತಿ ಇದೆ. ಆದರೆ, ಇಲ್ಲೆ ಬಿಸಿಯೂಟ ತಯಾರಾಗುತ್ತದೆ. ಕಾಲೇಜಿನ ತರಗತಿ ನಡೆಯುವ ಕೆಲವು ಕೋಣೆಗಳ ತಾರಿಸಿಯಿಂದ ಮಳೆಗಾಲದಲ್ಲಿ ನೀರು ಜಿನುಗುತ್ತದೆ. ಪ್ರೌಢಶಾಲೆಯ 9 ಕೋಣೆಗಳ ಸ್ಥಿತಿ ತಕ್ಕಮಟ್ಟಿಗಿದೆ.

ಶಿಕ್ಷಕರ ಅಸಹಾಯಕತೆ: ‘ಬೋರ್‌ವೆಲ್‌ ಸಂಪರ್ಕ ಇರುವ ನೀರಿನ ಟ್ಯಾಂಕ್‌ನ ನಳಗಳನ್ನು ಪುಂಡ– ಪೋಕರಿಗಳು ಪದೇಪದೇ ಮುರಿದು ಹಾಕುತ್ತಾರೆ. ಎಷ್ಟೇ ದುರಸ್ತಿ ಮಾಡಿಸಿದರೂ ಪ್ರಯೋಜನ ಆಗುತ್ತಿಲ್ಲ. ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ, ಬಿಸಿಯೂಟದ ಪಾತ್ರೆಗಳನ್ನು ಮತ್ತು ಮಕ್ಕಳು ತಟ್ಟೆ– ಲೋಟ ತೊಳೆಯಲು ಸಮಸ್ಯೆ ಆಗಿದೆ. ಶಾಲಾ ಅವಧಿ ಮುಗಿದ ಮೇಲೆ ಆಟ ಆಡಲು ಮೈದಾನಕ್ಕೆ ಕಾಂಪೌಂಡ್‌ ಹಾರಿ ಬರುತ್ತಾರೆ. ಇವರನ್ನು ಗದರಿದರೆ ಶಾಲೆಯ ಬೀಗಗಳನ್ನು ಮುರಿಯುತ್ತಾರೆ’ ಎಂದು ಶಿಕ್ಷಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.

‘ಗಬ್ಬುನಾರುವ, ಹೆಗ್ಗಣ– ಹಂದಿ ಕಾಟವಿರುವ ಶೌಚಾಲಯ ವನ್ನು ಬಳಸುವುದಿಲ್ಲ. ಮಕ್ಕಳಂತೂ ಕಾಂಪೌಂಡ್‌ ಮೂಲೆಯಲ್ಲಿ ಬಹಿರ್ದಿಸೆ ಮಾಡುತ್ತಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮುಜುಗರ ಆಗುತ್ತದೆ. ನಾವು ಸಹ ಈ ಶೌಚಾಲಯವನ್ನು ಬಳಕೆ ಮಾಡುವುದಿಲ್ಲ’ ಎಂದು ಶಿಕ್ಷಕಿಯರು ಮುಖ ಕಿವುಚಿಕೊಂಡೆ ಶೌಚಾಲಯದ ಪರಿಸ್ಥಿತಿಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT