ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಜಲ ದಿಗ್ಬಂಧನ, ಶಾಲೆ ಆವರಣ ಜಲಾವೃತ, ಕುಸಿದ ಮನೆಗಳು

Last Updated 21 ಅಕ್ಟೋಬರ್ 2021, 13:07 IST
ಅಕ್ಷರ ಗಾತ್ರ

ಮಂಡ್ಯ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಾಲೆ ಉಕ್ಕಿ ನಗರದ ಬೀಡಿ ಕಾರ್ಮಿಕರ ಕಾಲೊನಿಗೆ ನೀರು ನುಗ್ಗಿದ ಕಾರಣ ಇಡೀ ಬಡಾವಣೆಗೆ ಜಲದಿಗ್ಬಂಧನ ಏರ್ಪಟ್ಟಿತ್ತು.

ಚಿಂದಗಿರಿದೊಡ್ಡಿ ಗ್ರಾಮದ ನಾಲೆ ತ್ಯಾಜ್ಯದಿಂದ ಕಟ್ಟಿಕೊಂಡು ನೀರು ಹೊರಕ್ಕೆ ಉಕ್ಕಿದೆ. ಮಳೆ ನೀರಿನ ಜೊತೆಗೆ ನಾಲೆ ನೀರೂ ಹರಿದ ಪರಿಣಾಮ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಮಧ್ಯರಾತ್ರಿ 2 ಗಂಟೆಯಿಂದ ಬೆಳಿಗ್ಗೆವರೆಗೂ ನೀರು ಹೊರ ಹಾಕುವಲ್ಲಿಯೇ ನಿವಾಸಿಗಳು ಕಾಲಕಳೆದಿದ್ದಾರೆ.

ಇಡೀ ಬಡಾವಣೆ ನಡುಗಡ್ಡೆಯಂತಾಗಿದ್ದ ಕಾರಣ ಜನರು ಹೊರಗೂ ಬರಲಾಗದೆ ಪರದಾಡಿದ್ದಾರೆ. ಬೆಳಿಗ್ಗೆ ಸ್ಥಳಕ್ಕೆ ಬಂದ ನಗರಸಭೆ ಸಿಬ್ಬಂದಿ, ಮನೆಯಿಂದ ಮಕ್ಕಳನ್ನು ಹೊರಗೆ ಕಳುಹಿಸದಂತೆ ಮೈಕ್‌ ಮೂಲಕ ಪ್ರಚಾರ ಮಾಡಿದ್ದಾರೆ.
ಕಾಲೊನಿಯಲ್ಲಿ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿರುವ ಕಾರಣ ನೀರು ಹರಿಯಲು ಸಾಧ್ಯವಾಗಿಲ್ಲ.

ವಿವೇಕಾನಂದ ಬಡಾವಣೆ, ಚಿಕ್ಕಮಂಡ್ಯ ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದು ಗುರುವಾರ ಬೆಳಿಗ್ಗೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಸೊಂಟದ ಉದ್ದ ನೀರು ಹರಿಯುತ್ತಿದ್ದ ಕಾರಣ ಜನರು ಹೊರಗೆ ಬರಲು ಸಾಧ್ಯವಾಗಲಿಲ್ಲ.

ಶಾಲಾ ಆವರಣ ಜಲಾವೃತ: ಬೀಡಿ ಕಾರ್ಮಿಕರ ಕಾಲೊನಿ ಪಕ್ಕದಲ್ಲೇ ಇರುವ ಜೆಎಸ್‌ಎಸ್‌ ಶಾಲಾ ಆವರಣವೂ ಜಲಾವೃತಗೊಂಡಿತ್ತು. ಹೀಗಾಗಿ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿತ್ತು. ತಾಲ್ಲೂಕಿನ ತುಂಬಕೆರೆ ಮೊರಾರ್ಜಿ ದೇಸಾಯಿ ವಸತಿ ನಿಲಯದ ನೂತನ ಕಟ್ಟಡದ 14 ಅಡಿ ಎತ್ತರದ ತಡೆಗೋಡೆಯು ಕುಸಿದು ಬಿದ್ದಿದೆ. ಉದ್ಘಾಟನೆಗೂ ಮೊದಲು ಕಟ್ಟಡ ಕುಸಿತ ಕಂಡಿದ್ದು ಕಳಪೆ ಕಾಮಗಾರಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆ ಕುಸಿತ: ಭಾರಿ ಮಳೆಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಲಕ್ಷ್ಮಮ್ಮ, ದೊಡ್ಡಪಾಳ್ಯ ಗ್ರಾಮದ ಪರಮೇಶ್‌ ಅವರ ಮನೆಗಳು ಭಾಗಶಃ ಕುಸಿದಿವೆ. ಕಡತನಾಳು ಗ್ರಾಮದ ಇನ್ನೊಂದು ಮನೆ ಕುಸಿದಿದೆ. ನೆಲಮನೆ ಗ್ರಾಮದ ಸಂಗ್ರಹಿಸಿದ್ದ 2 ಟನ್‌ಗೂ ಹೆಚ್ಚು ಕಬ್ಬಿನ ಕಂತೆಗಳು ಕೊಚ್ಚಿ ಹೋಗಿವೆ. ಭತ್ತ, ಕಬ್ಬಿನ ಗದ್ದೆಗಳು ಜಲಾವೃತಗೊಂಡಿವೆ.

ಅಣೆಕಟ್ಟೆಗೆ ಜೀವಕಳೆ: ನಾಗಮಂಗಲ ತಾಲ್ಲೂಕು ದಮ್ಮಸಂದ್ರ ಗ್ರಾಮದ ಬಳಿ ವೀರವೈಷ್ಣವಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆ ಮೇಲಿಂದ ನೀರು ಧುಮ್ಮಿಕ್ಕುತ್ತಿದ್ದು ಜೀವಕಳೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT