ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಸಂಸ್ಕರಣಾ ಘಟಕಕ್ಕೆ ₹ 10 ಕೋಟಿ ನಿಗದಿ

ಬೈರಾಪಟ್ಟಣದಲ್ಲಿ ಶೀಘ್ರ ಕಾಮಗಾರಿ ಆರಂಭ
Last Updated 4 ಸೆಪ್ಟೆಂಬರ್ 2021, 3:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಬೈರಾಪಟ್ಟಣ ತೋಟಗಾರಿಕಾ ಫಾರಂ ಬಳಿ ₹10 ಕೋಟಿ ವೆಚ್ಚದಲ್ಲಿ ಮಾವು ಸಂಸ್ಕರಣಾ ಘಟಕದ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಎರಡು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜು ತಿಳಿಸಿದರು.

ತಾಲ್ಲೂಕಿನ ಬೈರಾಪಟ್ಟಣ ಗ್ರಾಮದ ತೋಟಗಾರಿಕಾ ಫಾರಂಗೆ ಶುಕ್ರವಾರ ಭೇಟಿ ನೀಡಿ, ಮಾವು ಸಂಸ್ಕರಣಾ ಘಟಕಕ್ಕೆ ಮೀಸಲಿರಿಸಿರುವ ಜಾಗವನ್ನು ಪರಿಶೀಲಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಯೋಜನೆಯ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.

ನಾಲ್ಕು ಎಕರೆ ಜಾಗದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು. ಸಂಸ್ಕರಣಾ ಘಟಕದ ಜೊತೆಗೆ ಮಾವಿನ ಉತ್ಪನ್ನಗಳ ಪ್ರದರ್ಶನ, ಮಾರುಕಟ್ಟೆ ಹಾಗೂ ರೈತರಿಗೆ ತರಬೇತಿ ನೀಡುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾವು ಜೊತೆಗೆ ಈ ಭಾಗದಲ್ಲಿ ಬೆಳೆಯುವ ಇತರೆ ತೋಟಗಾರಿಕಾ ಬೆಳೆಗಳ ಸಂಸ್ಕರಣೆಗೂ ಈ ಘಟಕದಲ್ಲಿ ಅವಕಾಶ ನೀಡಲಾಗುವುದು. ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿ ರೈತರು ಹಾಗೂ ಉತ್ಪನ್ನಗಳ ತಯಾರಕರು ಈ ಘಟಕದಲ್ಲಿ ತಮ್ಮ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮಾವು ಅಭಿವೃದ್ಧಿ ಮಂಡಳಿಗೆ ತೋಟಗಾರಿಕಾ ಇಲಾಖೆಯಿಂದ ಬೈರಾಪಟ್ಟಣ ಫಾರಂನಲ್ಲಿ 15 ಎಕರೆ ಭೂಮಿ ನೀಡಲಾಗಿದೆ. ಇದರಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಿ ಉಳಿದ 11 ಎಕರೆ ಜಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಾವು ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾವಿನ ಹಣ್ಣಿನ ತಿರುಳು ತೆಗೆದು ಸಂಗ್ರಹಿಸುವುದು, ಮಾವಿನ ಕ್ಯಾಂಡಿ, ವೈಜ್ಞಾನಿಕ ವಿಧಾನದಲ್ಲಿ ಉಪ್ಪಿನಕಾಯಿ ತಯಾರಿಕೆ, ಮಾವಿನ ಹಣ್ಣಿನ ರಸ ತಯಾರಿಸುವುದು ಸೇರಿದಂತೆ ಮಾವಿನಿಂದ ತಯಾರಿಸಬಹುದಾದ ಉತ್ಪನ್ನಗಳನ್ನು ಈ ಘಟಕದಲ್ಲಿ ತಯಾರು ಮಾಡಲಾಗುವುದು ಎಂದು ವಿವರಿಸಿದರು.

ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ಉಪ ನಿರ್ದೇಶಕ ಗುಣವಂತ್, ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮುನೇಗೌಡ, ತಾಲ್ಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿವೇಕ್, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT