ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಾಜ್ ಮುಗಿಸಿ ಹೋದವರು ಮರಳಿ ಬರಲಿಲ್ಲ... ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ಸಾವು

Published 18 ಮೇ 2024, 5:32 IST
Last Updated 18 ಮೇ 2024, 5:32 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಅಚ್ಚಲು ಗ್ರಾಮದ ಹೊರವಲಯದ ಬೃಹತ್ ಬಂಡೆಯ ಮೇಲಿರುವ ನೀರಿನ ಹೊಂಡ ದಲ್ಲಿ ಶುಕ್ರವಾರ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌.

ರಾಮನಗರದ ಮೆಹಬೂಬನಗರ ಹೊಸಳ್ಳಿ ಬೀದಿಯ ಫೂಲ್‌ಭಾಗ್ ಮೊಹಲ್ಲಾದ ಮುಬಿನ್ ಅವರ ಪುತ್ರ ಸಯ್ಯದ್ ಶಾಹಿದ್ (14), ಸರ್ದಾರ್ ಖಾನ್ ಅವರ ಪುತ್ರರಾದ ರಿಹಾನ್ ಖಾನ್ (16) ಹಾಗೂ ಶಹಬಾಜ್ ಖಾನ್ (13) ಮೃತರು.

ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಸಯ್ಯದ್ 6ನೇ ತರಗತಿ ಮತ್ತು ಶಹಬಾಜ್ 8ನೇ ತರಗತಿಯಲ್ಲಿ ಓದುತ್ತಿದ್ದ. ಐಜೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ರಿಹಾನ್ ಈ ಬಾರಿ 9ನೇ ತರಗತಿ ಮುಗಿಸಿ 10ನೇ ತರಗತಿಗೆ ಕಾಲಿಟ್ಟಿದ್ದ.

ನಮಾಜ್ ಮುಗಿಸಿ ಹೋಗಿದ್ದರು:  ಮೆಹಬೂಬನಗರದ ಮಸೀದಿಯಲ್ಲಿ ಮಧ್ಯಾಹ್ನ ಮೃತ ಮೂವರು ಮಕ್ಕಳು ಸೇರಿದಂತೆ 8 ಮಂದಿ ಸ್ನೇಹಿತರು ನಮಾಜ್ ಮುಗಿಸಿದ್ದರು. ನಂತರ ಹೊರಗಡೆ ಸುತ್ತಾಡಿಕೊಂಡು ಬರಲು ಮಸೀದಿಯಿಂದ ಹೊರಟಿದ್ದರು. ರಾಮ ನಗರ ಹೊರವಲಯದಲ್ಲಿ ಹರಿಯುವ ಅರ್ಕಾವತಿ ನದಿ ದಾಟಿದ್ದ ಮಕ್ಕಳು, ಮಧ್ಯಾಹ್ನ 1.40ರ ಸುಮಾರಿಗೆ ಅಚ್ಚಲು ಬಳಿ ರಾಮನಗರ–ಕನಕಪುರ ರಸ್ತೆಗೆ ಹೊಂದಿಕೊಂಡಂತಿರುವ ಬೃಹತ್ ಬಂಡೆ ಏರಿದ್ದರು ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು. ಬಂಡೆಯನ್ನು ಏರಿದ್ದ ಮಕ್ಕಳಿಗೆ ಅಲ್ಲಿಯೇ ಇದ್ದ ಸಣ್ಣ ನೀರಿನ ಹೊಂಡ ಕಾಣಿಸಿತ್ತು. ಹೊಂಡ ಅಷ್ಟೇನೂ ಆಳವಿಲ್ಲ ಎಂದು ಭಾವಿಸಿದ ಶಹಬಾಜ್, ರಿಹಾನ್ ಹಾಗೂ ಸಯ್ಯದ್ ಈಜು ಬಾರದಿದ್ದರೂ ತಮ್ಮ ಬಟ್ಟೆ ಮತ್ತು ಪಾದರಕ್ಷೆಗಳನ್ನು ಕಳಚಿಟ್ಟು ಒಟ್ಟಿಗೆ ನೀರಿಗೆ ಜಿಗಿದಿದ್ದಾರೆ. ತ್ರಿಕೋನಾಕಾರದಲ್ಲಿದ್ದ ಹೊಂಡವು ಆಳವಾಗಿದ್ದರಿಂದ ಮೂವರಿಗೂ ನಿಯಂತ್ರಣ ಸಿಗದೆ ಏಕಾಏಕಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಸ್ನೇಹಿತರು ಮುಳುಗುತ್ತಿರುವುದನ್ನು ಉಳಿದವರು ನೋಡುತ್ತಿದ್ದರೂ, ಈಜು ಬಾರದಿದ್ದರಿಂದ ಅವರನ್ನು ರಕ್ಷಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದರು. ಕೂಡಲೇ ಒಂದಿಬ್ಬರು ರಸ್ತೆಯತ್ತ ಓಡಿ ಹೋಗಿ, ಸಮೀಪದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಅವರಿಂದ ಸ್ಥಳೀಯರಿಗೆ ವಿಷಯ ಗೊತ್ತಾಗಿ ಸ್ಥಳಕ್ಕೆ ಬರುವಷ್ಟರಲ್ಲಿ ಮೂವರು ನೀರು ಪಾಲಾ ಗಿದ್ದರು ಎಂದು ಮಾಹಿತಿ ನೀಡಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಒಂದು ತಾಸು ಕಾರ್ಯಾಚರಣೆ ನಡೆಸಿ ಮೂವರ ಶವಗಳನ್ನು ಹೊರತೆಗೆದರು. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಸ್ಥಳಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್, ತಹಶೀಲ್ದಾರ್ ತೇಜಸ್ವಿನಿ, ಸಬ್ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿದ್ದರು.

ಮುಗಿಲು ಮುಟ್ಟಿದ ರೋದನ: ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅವರ ತಂದೆ–ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಲ್ಲಿ ಇಬ್ಬರು ಸಹೋದರರು ಹಾಗೂ ಮತ್ತೊಬ್ಬ ಕುಟುಂಬದ ಏಕೈಕ ಪುತ್ರನಾಗಿದ್ದ. ಕುಟುಂಬದವರನ್ನು ಸಂಬಂಧಿಕರು ಮತ್ತು ಸ್ಥಳೀಯರು ಸಮಾಧಾನ ಮಾಡಲು ಯತ್ನಿಸಿದರು. ಅವರ ರೋದನ ಕಂಡು ಸ್ಥಳದಲ್ಲಿದ್ದವರಿಗೂ ದುಃಖ ಉಮ್ಮಳಿಸಿ ಬಂತು.

ನೀರಿಗಿಳಿಯುವುದಕ್ಕೆ ಮುಂಚೆ ಹೊಂಡದ ಬಳಿ ತಮ್ಮ ಬಟ್ಟೆ ಹಾಗೂ ಚಪ್ಪಲಿ ಬಿಚ್ಚಿಟ್ಟಿದ್ದ ಮೂವರು ಬಾಲಕರು

ನೀರಿಗಿಳಿಯುವುದಕ್ಕೆ ಮುಂಚೆ ಹೊಂಡದ ಬಳಿ ತಮ್ಮ ಬಟ್ಟೆ ಹಾಗೂ ಚಪ್ಪಲಿ ಬಿಚ್ಚಿಟ್ಟಿದ್ದ ಮೂವರು ಬಾಲಕರು

ಘಟನೆಗೂ ಮುಂಚೆ ವಿಡಿಯೊ

ಬಂಡೆಯನ್ನು ಏರಿದ್ದ ಮಕ್ಕಳು ಘಟನೆಗೂ ಮುಂಚೆ ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಚಿತ್ರೀಕರಿಸಿ, ಫೋಟೊ ಕೂಡ ತೆಗೆದುಕೊಂಡಿದ್ದರು. ಗುಂಪಿನಲ್ಲಿದ್ದ ಬಾಲಕನೊಬ್ಬ ಹೊಂಡದ ಬಳಿ ಸ್ನೇಹಿತರು ಹೋಗಿ ನೋಡುತ್ತಿರುವುದನ್ನು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೊ ಮಾಡಿದ್ದ. ಇದಾದ ಬಳಿಕ, ಮೂವರು ಸ್ನೇಹಿತರು ನೀರಿಗಿಳಿದಿದ್ದರು ಎಂದು ಸ್ಥಳೀಯರು ತಿಳಿಸಿದರು.

ಮೃತ ಬಾಲಕರೊಂದಿಗೆ ಬಂದಿದ್ದ ಸ್ನೇಹಿತರು ಘಟನೆ ಕುರಿತು ಡಿವೈಎಸ್ಪಿ ದಿನಕರ ಶೆಟ್ಟಿ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ಹಾಗೂ ತಹಶೀಲ್ದಾರ್ ತೇಜಸ್ವಿನಿ ಅವರಿಗೆ ವಿವರಿಸಿದರು

ಮೃತ ಬಾಲಕರೊಂದಿಗೆ ಬಂದಿದ್ದ ಸ್ನೇಹಿತರು ಘಟನೆ ಕುರಿತು ಡಿವೈಎಸ್ಪಿ ದಿನಕರ ಶೆಟ್ಟಿ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ಹಾಗೂ ತಹಶೀಲ್ದಾರ್ ತೇಜಸ್ವಿನಿ ಅವರಿಗೆ ವಿವರಿಸಿದರು 

ಹೊಂಡದ ಹೂಳು ತೆಗೆಯಲಾಗಿತ್ತು

ನೀರಿನ ಹೊಂಡಕ್ಕೆ ಹೊಂದಿಕೊಂಡಂತೆ ಸ್ಥಳೀಯರ ಕೃಷಿ ಭೂಮಿ ಹಾಗೂ ಮಾವಿನ ತೋಟ ಸಹ ಇದೆ. ಹೊಂಡದಲ್ಲಿ ನಿಲ್ಲುವ ಮಳೆ ನೀರು ಇಲ್ಲಿನ ಕೃಷಿ ಚಟುವಟಿಕೆಗಳಿಗೂ ಬಳಕೆಯಾಗುತ್ತದೆ. ಮಳೆ ಇಲ್ಲದೆ ಬತ್ತಿದ್ದ ಹೊಂಡದಲ್ಲಿದ್ದ ಹೂಳನ್ನು ಕೆಲ ತಿಂಗಳ ಹಿಂದೆ ತೆಗೆಯಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅಲ್ಲಿ ಮತ್ತೆ ನೀರು ಸಂಗ್ರಹಗೊಂಡಿತ್ತು. ಹೊಂಡವು ಸುಮಾರು 15ರಿಂದ 20 ಅಡಿಯಷ್ಟು ಆಳವಿರುವುದನ್ನು ಅರಿಯದ ಮಕ್ಕಳು ಆಟವಾಡಲು ನೀರಿಗಿಳಿದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT