ರಾಮನಗರ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಜಮೀನುಗಳು ಜಲಾವೃತವಾಗಿವೆ. ಜಿಲ್ಲೆಯಲ್ಲಿ ಗುರುವಾರ ರಾತ್ರಿ 47 ಮಿ.ಮೀ. ನಷ್ಟು ಸರಾಸರಿ ಮಳೆ ಪ್ರಮಾಣ ದಾಖಲಾಗಿದೆ.
ರಾಮನಗರ ತಾಲ್ಲೂಕಿನಾದ್ಯಂತ ಶುಕ್ರವಾರವೂ ಉತ್ತಮ ಮಳೆ ಸುರಿಯಿತು. ಗುರುವಾರ ರಾತ್ರಿಯಿಡೀ ವರ್ಷಧಾರೆ ಆಗಿದ್ದು, ಶುಕ್ರವಾರ ಆಗಾಗ್ಗೆ ಮಳೆಯ ಸಿಂಚನವಾಯಿತು. ದಿನವಿಡೀ ಮೋಡ ಕವಿದ ವಾತಾವರಣ ಇದ್ದು, ಸೂರ್ಯ ಮರೆಯಾಗಿ ಹೋಗಿದ್ದ. ಕಳೆದ 15 ದಿನದಿಂದ ಬಿಸಿಲಿದ್ದು ಬಾಡುವ ಹಂತದಲ್ಲಿದ್ದ ಬೆಳೆಗಳಿಗೆ ಈ ಮಳೆ ಸಂಜೀವಿನಿಯಾಗಿದೆ. ಹೆಚ್ಚಿನ ಮಳೆಯಿಂದಾಗಿ ತಗ್ಗಿನ ಭಾಗದಲ್ಲಿರುವ ಜಮೀನುಗಳಲ್ಲಿ ನೀರು ನಿಂತಿದೆ. ಅದರಲ್ಲೂ ಬೆಟ್ಟಸಾಲಿನ ಕೆಳಭಾಗದ ಜಮೀನುಗಳು ಜಲಾವೃತಗೊಂಡಿವೆ.
ಶುಕ್ರವಾರ ಬೆಳಿಗ್ಗೆಗೆ ಕೊನೆಗೊಂಡಂತೆ ಕಳೆದ 24 ತಾಸಿನಲ್ಲಿ ಚನ್ನಪಟ್ಟಣ ತಾಲ್ಲೂಕಿನಲ್ಲಿ 37 ಮಿ.ಮೀ, ಕನಕಪುರ ತಾಲ್ಲೂಕಿನಲ್ಲಿ 48 ಮಿ.ಮೀ. ಮಾಗಡಿಯಲ್ಲಿ 49 ಹಾಗೂ ರಾಮನಗರ ತಾಲ್ಲೂಕಿನಲ್ಲಿ 52 ಮಿ.ಮೀ. ನಷ್ಟು ಸರಾಸರಿ ಮಳೆ ದಾಖಲಾಗಿದೆ.
ಮಾಗಡಿ ತಾಲ್ಲೂಕಿನ ಮತ್ತಿಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ 71 ಮಿ.ಮೀ, ಆಗಲಕೋಟೆಯಲ್ಲಿ 65 ಮಿ.ಮೀ, ಕನಕಪುರ ತಾಲ್ಲೂಕಿನ ತೋಕಸಂದ್ರದಲ್ಲಿ 67 ಮಿ.ಮೀ, ಮರಳವಾಡಿ ಹೋಬಳಿಯಲ್ಲಿ 68 ಮಿ.ಮೀ. ಚಿಕ್ಕಮುದವಾಡಿಯಲ್ಲಿ 65 ಮಿ.ಮೀ. ರಾಮನಗರ ತಾಲ್ಲೂಕಿನ ಅಕ್ಕೂರಿನಲ್ಲಿ 65 ಮಿ.ಮೀ, ಲಕ್ಷ್ಮಿಪುರದಲ್ಲಿ 65 ಮಿ.ಮೀ ಹಾಗೂ ಚನ್ನಪಟ್ಟಣದ ವಂದಾರಗುಪ್ಪೆಯಲ್ಲಿ 65 ಮಿ.ಮೀ.ನಷ್ಟು ಮಳೆ ಪ್ರಮಾಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.