ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಹುಡುಗಿ’ಯ ಐಎಎಸ್‌ ಕನಸು

ಟೈಲರ್ ದಂಪತಿ ಮಗಳು ಎಂ.ಕಾಂ. ಪರೀಕ್ಷೆಯಲ್ಲಿ ಬೆಂಗಳೂರು ವಿ.ವಿ.ಗೆ ಮೊದಲಿಗಳು
Last Updated 23 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ‘ಮುಂದೆ ಭಾರತೀಯ ಆಡಳಿತಾತ್ಮಕ ಸೇವೆಗೆ (ಐಎಎಸ್‌) ಸೇರಿ ಜನರಿಗೆ ಕೈಲಾಗುವ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ’

–ಹೀಗೆಂದು ಭವಿಷ್ಯದ ತಮ್ಮ ಕನಸನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದು ತಾಲ್ಲೂಕಿನ ಬಿಡದಿ ಹೋಬಳಿಯ ಹೆಜ್ಜಾಲದ ಜುಟ್ಟನಪಾಳ್ಯ ನಿವಾಸಿ ಬಿ. ಶಿಲ್ಪಾ. ಅವರು ಬೆಂಗಳೂರು ವಿಶ್ವವಿದ್ಯಾಲಯವು ಈಚೆಗೆ ನಡೆಸಿದ ಎಂ.ಕಾಂ. ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೇ ಮೊದಲ ರ್‍ಯಾಂಕ್‌ ಪಡೆದಿದ್ದಾರೆ. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಅವರು ಸೋಮವಾರವಷ್ಟೇ ನಡೆದ ವಿ.ವಿ.ಯ 54ನೇ ಘಟಿಕೋತ್ಸವದಲ್ಲಿ ಬರೋಬ್ಬರಿ ಐದು ಬಂಗಾರದ ಪದಕಗಳನ್ನು ಕೊರಳಿಗೆ ಏರಿಸಿಕೊಂಡು ಮುಗುಳ್ನಗೆ ಬೀರಿದ್ದಾರೆ.

ಶಿಲ್ಪಾರ ತಂದೆ ಬಸವರಾಜು, ತಾಯಿ ಜಯಲಕ್ಷ್ಮಿ. ಇಬ್ಬರದೂ ಟೈಲರಿಂಗ್‌ ವೃತ್ತಿ. ಇದರಿಂದ ಬಂದ ಸಂಪಾದನೆಯೇ ಕುಟುಂಬದ ನಿರ್ವಹಣೆಗೆ ಆಧಾರ. ಆದರೂ ಮಗಳ ಓದಿನ ಕನಸಿಗೆ ನೀರೆರೆದು ಪೋಷಿಸಿದ್ದಾರೆ. ಇದೀಗ ಮಗಳ ಸಾಧನೆ ಕಂಡು ಅವರ ಕಣ್ಣಾಲೆಗಳು ತುಂಬಿವೆ.

ಬಸ್‌ನಲ್ಲೇ ಓದು: ನಿತ್ಯ ಹೆಜ್ಜಾಲದಿಂದ ಸೆಂಟ್ರಲ್‌ ಕಾಲೇಜಿಗೆ ಬಸ್‌ನಲ್ಲಿ ಹೋಗಿಬರುತ್ತಿದ್ದ ಶಿಲ್ಪಾ ಪ್ರಯಾಣಕ್ಕೆ ವ್ಯಯಿಸುತ್ತಿದ್ದ ಸಮಯವನ್ನೇ ಓದಿಗೆ ಸದ್ಬಳಕೆ ಮಾಡಿಕೊಂಡಿದ್ದಾರೆ. ‘ನಿತ್ಯ ಎರಡು–ಮೂರು ಗಂಟೆಯ ಪ್ರಯಾಣ ಮಾಡುತ್ತಿದ್ದೆ. ಈ ಸಮಯದಲ್ಲೇ ಹೆಚ್ಚು ಓದುತ್ತಿದ್ದೆ. ಇದರಿಂದ ಅಂದಿನ ಪಾಠ ಅಂದೇ ಓದಿಕೊಳ್ಳುವುದು ಸಾಧ್ಯವಾಯಿತು’ ಎನ್ನುತ್ತಾರೆ ಅವರು.

‘ಇದಲ್ಲದೆ ಕಾಲೇಜಿನ ಗ್ರಂಥಾಲಯದಲ್ಲಿನ ಓದು ಹೆಚ್ಚು ಉಪಯೋಗಕ್ಕೆ ಬಂದಿತು. ಸಹಪಾಠಿಗಳು, ಸ್ನೇಹಿತರು, ಪೋಷಕರ ಓದಿಗೆ ಪ್ರೇರೇಪಿಸಿದರು. ನಿತ್ಯ ಮೂರ್ನಾಲ್ಕು ಗಂಟೆ ಓದಿಗೆ ಮೀಸಲಿಡುತ್ತಿದ್ದೆ’ ಎಂದು ಅವರು ವಿವರಿಸುತ್ತಾರೆ.
ಐಎಎಸ್‌ಗೆ ತಯಾರಿ: ಐಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿರುವ ಶಿಲ್ಪಾ ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸಿದ್ದಾರೆ. ನಿತ್ಯ ಓದಿಗೆ ಇಂತಿಷ್ಟು ಸಮಯವನ್ನೂ ಮೀಸಲಿಟ್ಟಿದ್ದಾರೆ. ಜೊತೆಗೆ ವಾರಾಂತ್ಯದ ತರಬೇತಿ ಕಾರ್ಯಾಗಾರಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಾಕಷ್ಟು ಸಮಯ ಮೀಸಲಿಡಬೇಕಾಗುತ್ತದೆ. ಕೆಲಸದ ನಂತರದ ಅವಧಿಯನ್ನು ಹೆಚ್ಚು ಅದಕ್ಕೇ ವ್ಯಯಿಸುತ್ತಿದ್ದೇನೆ. ಸಾಮಾನ್ಯ ಜ್ಞಾನ ಹೆಚ್ಚಿಸುವ ವಿಷಯ, ಪಠ್ಯಗಳನ್ನು ಹೆಚ್ಚೆಚ್ಚು ಓದುತ್ತೇನೆ. ಈಗಾಗಲೇ ಐಎಎಸ್‌ ಉತ್ತೀರ್ಣರಾಗಿರುವವರ ಮಾರ್ಗದರ್ಶನ ಪಡೆಯುತ್ತಿದ್ದೇನೆ. ನನ್ನಂತೆಯೇ ಪರೀಕ್ಷೆಗೆ ಸಿದ್ಧತೆ ನಡೆಸಿರುವವರ ಜೊತೆ ವಿಷಯ ಹಂಚಿಕೊಳ್ಳುತ್ತೇನೆ’ ಎಂದು ತಮ್ಮ ಪರೀಕ್ಷೆಯ ಸಿದ್ಧತೆ ಕುರಿತು ಅವರು ವಿವರಿಸುತ್ತಾರೆ.

ಗ್ರಾಮಲೆಕ್ಕಿಗರಾಗಿ ಉದ್ಯೋಗ
ಶಿಲ್ಪಾ ಆರೇಳು ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ನೌಕರರಾಗಿ ಸೇವೆಗೆ ಸೇರಿದ್ದಾರೆ. ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಲೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ಹುದ್ದೆಯಲ್ಲಿ ಮುಂದುವರಿದು ಐಎಎಸ್‌ ಪರೀಕ್ಷೆಗೆ ಸಿದ್ಧತೆಯನ್ನೂ ನಡೆಸಿದ್ದಾರೆ.

ಪದವಿಯಲ್ಲೂ ಐದು ಪದಕ!
ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಓದಿಕೊಂಡೇ ಚಿನ್ನದ ಪದಕದ ಸಾಧನೆ ಮಾಡಿರುವುದು ಶಿಲ್ಪಾರ ವಿಶೇಷ.

ಒಂದರಿಂದ ಹತ್ತನೇ ತರಗತಿವರೆಗೂ ಹೆಜ್ಜಾಲದ ಸರ್ಕಾರಿ ಶಾಲೆಯಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ಅವರು ನಂತರ ಬೆಂಗಳೂರಿನ ಬಸವನಗುಡಿಯ ಬಿಎಂಎಸ್‌ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಪಿಯುಸಿಗೆ ಸೇರಿದರು. ಮುಂದೆ ಅಲ್ಲಿಯೇ ಬಿ.ಕಾಂ ಶಿಕ್ಷಣವನ್ನೂ ಪಡೆದರು. ಪದವಿಯಲ್ಲೂ ಓದಿನಲ್ಲಿ ಮುಂದೆ ಇದ್ದ ಅವರು ಬಿ.ಕಾಂ.ನಲ್ಲಿ ವಿಶ್ವವಿದ್ಯಾಲಯದಲ್ಲಿ ರ್‍ಯಾಂಕ್‌ ಗಳಿಸುವ ಜೊತೆಗೆ ಐದು ಬಂಗಾರದ ಪದಕವನ್ನೂ ಗಳಿಸಿದ್ದು ಅವರ ಶೈಕ್ಷಣಿಕ ಸಾಧನೆಗೆ ಹಿಡಿದ ಕನ್ನಡಿ ಆಗಿದೆ.

*
ಬಸ್‌ನಲ್ಲಿ ಓಡಾಡುವ ಸಮಯವನ್ನು ಓದಿಗೆ ಮೀಸಲಿಟ್ಟಿದ್ದೆ. ಗ್ರಂಥಾಲಯದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಇದೇ ಸಾಧನೆಗೆ ದಾರಿಯಾಯಿತು.
-ಬಿ. ಶಿಲ್ಪಾ, ಬಂಗಾರ ಪದಕ ಪುರಸ್ಕೃತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT