ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಒಂದೇ ದಿನ 67 ಪ್ರಕರಣ ದೃಢ

ರಾಮನಗರದಲ್ಲಿ ಕಾರ್ಯಾರಂಭ ಮಾಡಿದ ಪ್ರಯೋಗಾಲಯ; ಮುಂದೆ ಎರಡೇ ದಿನದಲ್ಲಿ ಸಿಗುತ್ತ ವರದಿ?
Last Updated 20 ಜುಲೈ 2020, 16:15 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 67 ಕೋವಿಡ್‌-19 ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈ ಸಂಖ್ಯೆಯಲ್ಲಿ ಸೋಂಕಿತರ ಪ್ರಕರಣಗಳು ವರದಿ ಆಗುತ್ತಿರುವುದು ಇದೇ ಮೊದಲು. ಈ ಪೈಕಿ ಚನ್ನಪಟ್ಟಣದಲ್ಲಿ ಗರಿಷ್ಠ 27 ಪ್ರಕರಣಗಳು ವರದಿಯಾಗಿವೆ. ಕನಕಪುರದಲ್ಲಿ 8, ಮಾಗಡಿಯಲ್ಲಿ 11 ಹಾಗೂ ರಾಮನಗರದಲ್ಲಿ 21 ಮಂದಿಯಲ್ಲಿ ಸೋಂಕು ದೃಢವಾಗಿದೆ. ಇದರಿಂದಾಗಿ ಒಟ್ಟಾರೆ ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆಯಾಗಿದೆ.

ಪ್ರಯೋಗಾಲಯ ಆರಂಭ: ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು, ವಾರಗಳ ಹಿಂದೆ ಸಂಗ್ರಹಿಸಿದ್ದ ಮಾದರಿಗಳನ್ನು ಈಗ ಪರೀಕ್ಷೆಗೆ ಒಳಪಡಿಸಿ ಫಲಿತಾಂಶ ನೀಡಲಾಗುತ್ತಿದೆ. ಹೆಚ್ಚೆಚ್ಚು ವರದಿಗಳ ಫಲಿತಾಂಶ ಬರುತ್ತಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಸೋಮವಾರದ ಅಂತ್ಯಕ್ಕೆ 1853 ಮಂದಿಯ ಕೋವಿಡ್‌ ಪರೀಕ್ಷಾ ವರದಿಗಳು ಬಾಕಿ ಇವೆ. ಇದರಲ್ಲಿ ಕೆಲವು ಮಾದರಿಗಳನ್ನು ವಾರಗಳ ಹಿಂದೆಯೇ ಸಂಗ್ರಹಿಸಿ ಕೊಡಲಾಗಿದೆ. ಆದರೂ ಫಲಿತಾಂಶ ಮಾತ್ರ ಸಿಕ್ಕಿಲ್ಲ.
ಜಿಲ್ಲೆಯಲ್ಲಿ ಈ ಹಿಂದೆ ಸಂಗ್ರಹಿಸಲಾದ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ನೀಡಲಾಗುತಿತ್ತು. ಆದರೆ ಅಲ್ಲಿ ಪ್ರಯೋಗಾಲಯದ ಸಿಬ್ಬಂದಿಗೇ ಸೋಂಕು ತಗುಲಿದ ಕಾರಣ ಫಲಿತಾಂಶ ವಿಳಂಬವಾಯಿತು. ನಂತರದಲ್ಲಿ ಮೈಸೂರು, ಮಂಡ್ಯ ಮೊದಲಾದ ಕಡೆಗಳಲ್ಲಿ ಪರೀಕ್ಷೆಗೆ ಪ್ರಯತ್ನ ನಡೆಯಿತ್ತಾದರೂ ಪ್ರಯೋಜನ ಆಗಿರಲಿಲ್ಲ. ಇದರಿಂದಾಗಿ ಶಂಕಿತರು ಓಡಾಡಿಕೊಂಡು ಮತ್ತಿಷ್ಟು ಮಂದಿಗೆ ಸೋಂಕು ಅಂಟಿರಬಹುದು ಎನ್ನುವ ಆತಂಕವೂ ವ್ಯಕ್ತವಾಗಿತ್ತು.

ಇದೀಗ ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಕಾರ್ಯಾರಂಭ ಮಾಡಿದೆ. ದಿನಕ್ಕೆ 250-300 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಇದಕ್ಕೆ ಇದೆ. ಹೀಗಾಗಿ ಉಳಿದ ಮಾದರಿಗಳ ವರದಿಗಳನ್ನು ಆದಷ್ಟು ಶೀಘ್ರ ಪರೀಕ್ಷಿಸುವ ಜೊತೆಗೆ ಅಂದಿನ ವರದಿಗಳ ಫಲಿತಾಂಶವನ್ನು ಅಂದೇ ಇಲ್ಲವೇ ಎರಡು ದಿನಗಳ ಒಳಗೆ ನೀಡುವ ಕೆಲಸ ಆಗಬೇಕು ಎಂದು ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಇಬ್ಬರು ಸಾವು

ಕೋವಿಡ್ ಸೋಂಕಿನಿಂದಾಗಿ ಸೋಮವಾರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆಯು 12ಕ್ಕೆ ಏರಿಕೆಯಾಗಿದೆ. ರಾಮನಗರ ತಾಲ್ಲೂಕಿನಲ್ಲಿ 65 ವರ್ಷದ ವ್ಯಕ್ತಿ ಹಾಗೂ ಮಾಗಡಿ ತಾಲ್ಲೂಕಿನ 25 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT