ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ಎಪಿಎಂಸಿ ಸ್ಥಾಪನೆಗೆ ಕ್ರಮ: ಸಚಿವ ಎಸ್‌.ಟಿ. ಸೋಮಶೇಖರ್‌

Last Updated 3 ಫೆಬ್ರುವರಿ 2022, 4:14 IST
ಅಕ್ಷರ ಗಾತ್ರ

ಮಾಗಡಿ: ‘ಬಿಡಿಸಿಸಿ ಬ್ಯಾಂಕ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಶಾಸಕ ಎ. ಮಂಜುನಾಥ್‌ ಅವರ ಭಾವಚಿತ್ರ ಹಾಕದೆ ಅಪಮಾನ ಮಾಡಿರುವುದು ಸರಿಯಲ್ಲ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಆಗಲಕೋಟೆ ಹ್ಯಾಂಡ್‌ಪೋಸ್ಟ್‌ನಲ್ಲಿ ಬುಧವಾರ ನಡೆದ ಬಿಡಿಸಿಸಿ ಬ್ಯಾಂಕ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರೇ ಆಗಲಿ ಕಾರ್ಯಕ್ರಮದಲ್ಲಿ ಸರ್ಕಾರದ ಶಿಷ್ಟಾಚಾರ ಪಾಲಿಸಬೇಕು. ಕ್ಷೇತ್ರದ ಶಾಸಕರಿಗೆ ಮೊದಲ ಆದ್ಯತೆ ನೀಡಬೇಕು. ಸರ್ಕಾರದ ಪ್ರತಿನಿಧಿಯಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದು ಶಾಸಕರಿಗೆ ಅಪಮಾನ ಮಾಡುವುದನ್ನು ಸರ್ಕಾರ ಸಹ ಒಪ್ಪುವುದಿಲ್ಲ. ಕಾರ್ಯಕ್ರಮದಲ್ಲಿ ಯಾವುದೇ ರಾಜಕಾರಣ ಇರಬಾರದು. ಸರ್ಕಾರದ ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಣ್ಣ ಹಿಡುವಳಿ ಮತ್ತು ದೊಡ್ಡ ಹಿಡುವಳಿದಾರರೆಂದು ತಾರತಮ್ಯ ತೋರಬಾರದು. ಎಲ್ಲಾ ರೈತರಿಂದಲೂ ಸರ್ಕಾರ ರಾಗಿ ಖರೀದಿಸಲಿದೆ. ಸಹಕಾರ ಇಲಾಖೆಯಿಂದ ರಾಜ್ಯದ 3,76,000 ರೈತರಿಗೆ ₹ 20,800 ಕೋಟಿಯನ್ನು ಸಾಲದ ರೂಪದಲ್ಲಿ ನೀಡುವ ಗುರಿ ಹೊಂದಲಾಗಿದೆ ಎಂದು
ತಿಳಿಸಿದರು.

ಯಾವ ರೈತರಿಗೂ ಬೆಳೆ ಸಾಲ ದೊರಕಿಲ್ಲ ಎಂಬ ದೂರು ಬರಬಾರದೆಂದು ಎಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ತಿಳಿಸಲಾಗಿದೆ. ಸ್ಥಳ ನೀಡಿದರೆ ಮಾಗಡಿ ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲಾಗುವುದು. ಹೆಗ್ಗನಹಳ್ಳಿ ಜಂಕ್ಷನ್‌ ಕೇಂದ್ರದಿಂದ ನೈಸ್ ರಸ್ತೆವರೆಗೆ ಪ್ಲೈಓವರ್ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಮಾಗಡಿಯಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಬೇಕು. ಮಂಚನಬೆಲೆ ಜಲಾಶಯದ ನೀರನ್ನು ಮಾಗಡಿ ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಮಾಡುತ್ತಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಮಂಚನಬೆಲೆ ಜಲಾಶಯಕ್ಕೆ ಬಿಡುತ್ತಿರುವ ಕಲುಷಿತ ನೀರನ್ನು ಶುದ್ಧೀಕರಿಸಬೇಕು. ತಾಲ್ಲೂಕಿನಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎ. ಮಂಜುನಾಥ್‌ ಮಾತನಾಡಿ, ‘ತಿಪ್ಪಸಂದ್ರ, ಕೂಟಗಲ್ ಭಾಗದಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಬೇಕು. ರೋಗ ಬಂದ ಹಸುವಿನ ರಕ್ತ, ಸಗಣಿ, ಮೂತ್ರ ಸ್ಯಾಂಪಲ್ ಪರೀಕ್ಷೆ ಮಾಡಲು ಹೆಬ್ಬಾಳದ ಲ್ಯಾಬ್‌ಗೆ ಹೋಗಬೇಕಿದ್ದು ವರದಿ ಬರುವುದು ತಡವಾಗುತ್ತಿದೆ. ವಿಳಂಬದಿಂದ ಹಸುಗಳು ಸಾವನಪ್ಪುತ್ತಿವೆ. ಆದ್ದರಿಂದ ಬಿಡದಿ ಬಳಿ ಜಾಗ ಗುರುತಿಸಲಾಗಿದ್ದು, ಅಲ್ಲಿಯೇ ಲ್ಯಾಬ್‌ ನಿರ್ಮಿಸಬೇಕು. ಪಿಎಲ್‌ಡಿ ಬ್ಯಾಂಕ್ ನಿರ್ಮಿಸಲು ಸಹಕಾರ ಇಲಾಖೆಯಿಂದ ಅನುದಾನ ನೀಡಬೇಕು’ ಎಂದರು.

ಮಾಗಡಿ ಬಳಿ ರಾಗಿ ಗೋದಾಮು ನಿರ್ಮಿಸಬೇಕು ಎಂದು ಕೋರಿದರು.

‘ಕಾರ್ಯಕ್ರಮದ ಬ್ಯಾನರ್‌ನಲ್ಲಿ ನನ್ನ ಭಾವಚಿತ್ರ ಹಾಕದಿರುವುದು ಅವರ ಸಣ್ಣತನ ತೋರಿಸುತ್ತದೆ. ನಾನು ಸಣ್ಣತನ ತೋರಿಸುವುದಿಲ್ಲ. ಭಾವಚಿತ್ರ ಹಾಕಿಲ್ಲ ಎಂದು ನಮ್ಮವರು ಬೇಸರಪಟ್ಟು ಕೊಳ್ಳಬಾರದು’ ಎಂದರು.

ಕಾರ್ಯಕ್ರಮದಲ್ಲಿ ಎಂಎಲ್‌ಸಿ ಸಿ.ಎಂ. ಲಿಂಗಪ್ಪ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತಯ್ಯ, ಉಪಾಧ್ಯಕ್ಷ ಎಂ.ಸಿ. ಪಟ್ಟಾಭಿರಾಮಯ್ಯ, ನಿರ್ದೇಶಕ ಎಚ್.ಎನ್. ಅಶೋಕ್, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ನಿರ್ದೇಶಕ ಕೆ.ಟಿ. ಮಂಜುನಾಥ್, ತಾ.ಪಂ. ಮಾಜಿ ಸದಸ್ಯೆ ಸುಮಾ ರಮೇಶ್, ಕೆಡಿಪಿ ಸದಸ್ಯ ಡಿ.ಜಿ, ಅಶೋಕ್, ಜೆಡಿಎಸ್‌ ಮುಖಂಡ ಎಚ್.ಜಿ. ತಮ್ಮಣ್ಣಗೌಡ, ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT