ಶನಿವಾರ, ಮಾರ್ಚ್ 25, 2023
30 °C

ರಾಮನಗರ: ನಟ ಪುನೀತ್ ಅಭಿಮಾನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ನಟ ಪುನೀತ್ ರಾಜಕುಮಾರ್ ನಿಧನದಿಂದ ಮಾನಸಿಕವಾಗಿ ನೊಂದಿದ್ದ ಅವರ ಅಭಿಮಾನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಗರದ ಎಲೇಕೇರಿಯಲ್ಲಿ ನಡೆದಿದೆ.

ವೆಂಕಟೇಶ್ (30) ಆತ್ಮಹತ್ಯೆ ಮಾಡಿಕೊಂಡವರು. ಈತ ಎಲೇಕೇರಿಯ ಕೃಷ್ಣಮೂರ್ತಿ ಎಂಬುವರ ಪುತ್ರ. ನಗರದ ಲಕ್ಷ್ಮಿ ಚಿತ್ರಮಂದಿರದ ಬಳಿ ವೆಂಕಿ ಜೆಂಟ್ಸ್ ಪಾರ್ಲರ್ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.

ಅವಿವಾಹಿತರಾಗಿದ್ದ ಅವರು ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಕೈಮೇಲೆ ಪುನೀತ್ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದರು. ಪುನೀತ್ ಜೊತೆ ಫೋಟೊ ತೆಗೆಸಿಕೊಂಡಿದ್ದರು. ಅವರ ಎಲ್ಲಾ ಸಿನಿಮಾಗಳನ್ನು ಐದರಿಂದ 10 ಬಾರಿ ನೋಡುತ್ತಿದ್ದರು. ಪುನೀತ್ ಹೃದಯಾಘಾತದಿಂದ ಸಾವನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

‘ಅಣ್ಣಾ ಪುನೀತ್ ಹೋದ ಮೇಲೆ ಬದುಕಿದ್ದು ಪ್ರಯೋಜನವೇನು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ತನ್ನ ಸ್ನೇಹಿತರ ಜೊತೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ವೆಂಕಟೇಶ್ ಖಿನ್ನತೆಗೆ ಒಳಗಾಗಿದ್ದನ್ನು ಗಮನಿಸಿದ್ದ ಆತನ ತಂದೆ, ತಾಯಿ ಆತನಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದರು. ಆದರೂ ಯಾರಿಗೂ ತಿಳಿಯದ ಹಾಗೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಆತ್ಮಹತ್ಯೆಗೂ ಮುನ್ನಾ ಡೆತ್‌ನೋಟ್ ಬರೆದಿರುವ ವೆಂಕಟೇಶ್, ಪುನೀತ್ ಅವರಂತೆ ನನ್ನ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಬೇಕೆಂದು ಕೋರಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.