ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಆದಿವಾಸಿಗಳಿಗೆ ತುರ್ತಾಗಿ ಬೇಕಿದೆ ಆಹಾರದ ಕಿಟ್

ಕೂಲಿ ಸಿಗದ ಕಾರಣ ಸಮಸ್ಯೆ: ದಿನಬಳಕೆ ವಸ್ತುಗಳಿಗೆ ಪರದಾಟ
Last Updated 27 ಏಪ್ರಿಲ್ 2020, 5:06 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿನ ಆದಿವಾಸಿ ಸಮುದಾಯಗಳ ಜನರು ಕೂಲಿ ಕೆಲಸವಿಲ್ಲದೇ ತತ್ತರಿಸಿದ್ದು, ಸರ್ಕಾರದ ನೆರವಿಗೆ ಅಂಗಲಾಚಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ಕೂ ತಾಲ್ಲೂಕಿನಲ್ಲೂ ಇರುಳಿಗ ಕುಟುಂಬಗಳು ವಾಸವಿವೆ. ಬದಲಾದ ಕಾಲಘಟ್ಟದಲ್ಲಿ ಇವರೆಲ್ಲ ಕಾಡು ತೊರೆದು ನಾಡು ಸೇರಿಕೊಂಡು ತೋಟಗಳಲ್ಲಿ, ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೂಲಿ ಕಾರ್ಮಿಕರಾಗಿ ನೆಲೆ ಕಂಡುಕೊಂಡಿದ್ದಾರೆ. ಇನ್ನೂ ಹಲವರು ಉದ್ಯೋಗ ಅರಸಿ ವಲಸೆ ಹೋಗಿದ್ದಾರೆ. ಇವರಲ್ಲದೇ ಸೋಲಿಗರು, ಹಕ್ಕಿಪಿಕ್ಕಿ ಜನಾಂಗದವರು ಹಾಗೂ ಮೇದರ ಸಮುದಾಯದ ಕುಟುಂಬಗಳು ಜಿಲ್ಲೆಯ ಅಲ್ಲಲ್ಲಿ ವಾಸವಿದ್ದಾರೆ. ಈ ಎಲ್ಲ ಸಮುದಾಯದ ಜನರಿಗೆ ಲಾಕ್‌ಡೌನ್‌ ಕಾರಣದಿಂದಾಗಿ ಉದ್ಯೋಗ ಇಲ್ಲದಾಗಿದೆ. ಸರ್ಕಾರ ಪಡಿತರ ವ್ಯವಸ್ಥೆ ಮೂಲಕ ಅಕ್ಕಿ ನೀಡುತ್ತಿದೆ. ಆದರೆ, ಅದೊಂದರಿಂದಲೇ ಬದುಕು ಸಾಗದು. ಇತರ ಜೀವನಾವಶ್ಯಕ ಸಾಮಗ್ರಿಗಳ ಕೊರತೆಯೂ ಇದೆ ಎನ್ನುತ್ತಾರೆ ಇರುಳಿಗ ಸಮುದಾಯದ ಮುಖಂಡರು.

ಎಲ್ಲೆಲ್ಲಿ ವಾಸ: ಕನಕಪುರ ತಾಲ್ಲೂಕಿನಲ್ಲಿ ಇರುಳಿಗರು ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. 52ಹಳ್ಳಿಗಳಲ್ಲಿ ಇವರು ನೆಲೆ ಕಂಡುಕೊಂಡಿದ್ದಾರೆ. ಊರುಗಳ ಅಂಚಿಗೆ ತಮ್ಮದೇ ಪ್ರತ್ಯೇಕ ಕಾಲೊನಿಗಳಲ್ಲಿ ಪುಟ್ಟ ಮನೆ, ಗುಡಿಸಲು ಕಟ್ಟಿಕೊಂಡು ವಾಸವಿದ್ದಾರೆ. ಅನುಕೂಲ ಇದ್ದ ಕೆಲವೇ ಮಂದಿ ಮಾತ್ರ ತಕ್ಕಮಟ್ಟಿಗೆ ನೆಲೆ ಕಂಡುಕೊಂಡಿದ್ದಾರೆ. ಕನಕಪುರ ತಾಲ್ಲೂಕಿನ ಬುಡಗಯ್ಯನದೊಡ್ಡಿ, ಗುಳವಾಡಿ, ನೆಹರುದೊಡ್ಡಿ, ಮಡಿವಾಳ, ಕೆಬ್ಬೇದೊಡ್ಡಿ, ಇರುಳಿಗರ ಕಾಲೊನಿ, ಮುನೇಶ್ವರನ ದೊಡ್ಡಿ ಮೊದಲಾದ ಕಡೆ ಈ ಸಮುದಾಯದವರಿದ್ದಾರೆ. ರಾಮನಗರ ತಾಲ್ಲೂಕಿನ ಸುಮಾರು 26 ಹಳ್ಳಿಗಳಲ್ಲಿ ಈ ಸಮುದಾಯದವರಿದ್ದಾರೆ. ಕೂಟಗಲ್‌, ಯರೇಹಳ್ಳಿ, ರಾಮದೇವರ ಬೆಟ್ಟ, ತಮ್ಮನಾಯ್ಕನಹಳ್ಳಿ, ವಡ್ಡರಹಳ್ಳಿ, ಗೊಲ್ಲರದೊಡ್ಡಿ, ಕೂನಮುದ್ದನಹಳ್ಳಿ, ದಾಸನಹಳ್ಳಿ. ಅಂಕನಹಳ್ಳಿ, ಕಾಡನಕುಪ್ಪೆ, ವಡೇರಹಳ್ಳಿಗಳಲ್ಲಿನ ಇರುಳಿಗರ ಕಾಲೊನಿಗಳಲ್ಲಿ ಇವರನ್ನು ಹೆಚ್ಚಾಗಿ ಕಾಣಬಹುದಾಗಿದೆ.

ಮಾಗಡಿ ತಾಲ್ಲೂಕಿನ 11 ಹಳ್ಳಿಗಳಲ್ಲಿ ಈ ಸಮುದಾಯದವರು ಇದ್ದಾರೆ. ಜೋಡುಗಟ್ಟೆ, ಜೇನುಕಲ್ಲುಪಾಳ್ಯ, ಸಿದ್ದೇಶ್ವರ ಕಾಲೊನಿ, ಕುರಿಲಿಂಗಯ್ಯನದೊಡ್ಡಿ, ಏಳ್ಗಳ್ಳಿ ಕಾಲೊನಿ, ಹೂಜಗಲ್‌ ಗುಡ್ಡೆ, ರಾಮನಕಲ್ಲು ಪಾಳ್ಯ, ಗೊಲ್ಲರ ಪಾಳ್ಯ, ಕಾಳಯ್ಯನಪಾಳ್ಯ ಸುತ್ತಮುತ್ತ ಇವರು ಕಂಡು ಬರುತ್ತಾರೆ. ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಬಳಿಯ ಇರುಳಿಗರ ದೊಡ್ಡಿಯಲ್ಲಿ ಸುಮಾರು 160 ಕುಟುಂಬಗಳು ನೆಲೆ ಕಂಡುಕೊಂಡಿವೆ.

ಜಿಲ್ಲೆಯಲ್ಲಿನ ಆದಿವಾಸಿ ಸಮುದಾಯಗಳ ಪೈಕಿ ಸೋಲಿಗರು ಎರಡನೇ ಸ್ಥಾನದಲ್ಲಿ ಇದ್ದಾರೆ. ಕನಕಪುರ ತಾಲ್ಲೂಕಿನ ಸೋಲಿಗೆರೆ, ಹೂಳ್ಯ, ಹೊಸದೊಡ್ಡಿ, ಮಳಕಂದ, ಚನ್ನಪಟ್ಟಣದ ಮೈಲನಾಯ್ಕನಹೊಸಹಳ್ಳಿ, ಕೋಡಂಬಳ್ಳಿ ಮೊದಲಾದ ಊರುಗಳಲ್ಲಿ ಈ ಜನರಿದ್ದಾರೆ. ರಾಮನಗರ ತಾಲ್ಲೂಕಿನ ಭದ್ರಾಪುರ, ಗೌರಿಪುರ, ಕನಕಪುರದ ಹಾರೋಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೊನಿಗಳಲ್ಲಿ ಹಕ್ಕಿಪಿಕ್ಕಿ ಸಮಯದಾಯದವರಿದ್ದಾರೆ.

ಲಾಕ್‌ಡೌನ್‌ನ ಆರಂಭದ ದಿನಗಳಲ್ಲಿ ಸಂಘ-ಸಂಸ್ಥೆಗಳು, ಗ್ರಾ.ಪಂ. ಸಿಬ್ಬಂದಿ ಮೊದಲಾದವರ ಮೂಲಕ ಒಂದಿಷ್ಟು ಕುಟುಂಬಗಳಿಗೆ ಪಡಿತರ ಸಿಕ್ಕಿದೆ. ಆದರೆ ದಿನ ಕಳೆದಂತೆಲ್ಲ ಆಹಾರದ ಕೊರತೆ ಕಾಡತೊಡಗಿದೆ. ಮುಖ್ಯವಾಗಿ ಜನರಿಗೆ ಬೇಕಾದ ಕಾಳು-ಎಣ್ಣೆ ಮೊದಲಾದ ದಿನಸಿ ಸಾಮಗ್ರಿಗಳು, ದಿನಬಳಕೆಯ ವಸ್ತುಗಳ ಕೊರತೆ ಇದೆ. ಮಾಸ್ಕ್, ಸ್ಯಾನಿಟೈಸರ್‌ಗಳ ಬಳಕೆ ಈ ಸಮುದಾಯಗಳಿಂದ ದೂರವೇ ಉಳಿದಿದೆ.

ಜಿಲ್ಲಾಡಳಿತಕ್ಕೆ ಮನವಿ: ‘ಜಿಲ್ಲೆಯಲ್ಲಿನ ಎಲ್ಲ ಆದಿವಾಸಿ ಸಮುದಾಯದ ಜನರಿಗೆ ಆಹಾರ ಕಿಟ್ ನೀಡುವಂತೆ ಕೋರಿ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ವಾರದ ಹಿಂದೆಯೇ ಮನವಿ ಸಲ್ಲಿಸಿದ್ದೇವೆ. ಸೂಕ್ತ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಈವರೆಗೆ ಆಹಾರ ಸಾಮಗ್ರಿ ತಲುಪಿಲ್ಲ’ ಇರುಳಿಗ ಸಮುದಾಯದ ಮುಖಂಡ ಕೃಷ್ಣಮೂರ್ತಿ. ’ಉದ್ಯೋಗ ಕಳೆದುಕೊಂಡ ಕಾರಣ ಜನರಲ್ಲಿ ಹಣವಿಲ್ಲ. ಹೀಗಾಗಿ ಏನನ್ನೂ ಖರೀದಿಸಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ. ಅಧಿಕಾರಿಗಳು ಕೂಡಲೇ ನೆರವಿಗೆ ಧಾವಿಸಬೇಕು ಎಂಬುದು ಅವರ ಮನವಿ.

***
ಅಂಕಿ-ಅಂಶ
ಜಿಲ್ಲೆಯಲ್ಲಿರುವ ಅಂದಾಜು ಆದಿವಾಸಿ ಕುಟುಂಬಗಳು
ಇರುಳಿಗರು;2500
ಸೋಲಿಗರು;350
ಹಕ್ಕಿಪಿಕ್ಕಿ;300
ಮೇದರು;400


ಹಳ್ಳಿಗಳಲ್ಲಿನ ಸಾವಿರಾರು ಆದಿವಾಸಿ ಕುಟುಂಬಗಳಿಗೆ ಆಹಾರದ ಕೊರತೆ ಇದೆ. ಸರ್ಕಾರ ಕೂಡಲೇ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಬೇಕು.
-ಕೃಷ್ಣಮೂರ್ತಿ
ಇರುಳಿಗ ಸಮುದಾಯದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT