ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿನಿರ್ವಾಣ ಶಿವಯೋಗಿ ಜಾತ್ರಾ ಸಂಭ್ರಮ

ಕನಕಪುರ: ದೇಗುಲ ಮಠದ ಗದ್ದುಗೆಗೆ ವಿಶೇಷ ಅಲಂಕಾರ
Last Updated 17 ಫೆಬ್ರುವರಿ 2022, 4:52 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ತ್ರಿವಿಧ ದಾಸೋಹದ ದೇಗುಲ ಮಠದಲ್ಲಿ ಶ್ರೀಆದಿನಿರ್ವಾಣ ಮಹಾ ಶಿವಯೋಗಿಯ ಬ್ರಹ್ಮ ರಥೋತ್ಸವವು ಕೋವಿಡ್ ನಿಯಮ ಪಾಲನೆಯೊಂದಿಗೆ ಬುಧವಾರ ಸರಳವಾಗಿ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲ ಮಠದಲ್ಲಿನ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿದ್ದು, ಪೂಜಾ ಕೈಂಕರ್ಯ ನೆರವೇರಿಸಲಾಯಿತು.ಬೆಳಿಗ್ಗೆ 4 ಗಂಟೆಗೆ ರುದ್ರಾಭಿಷೇಕ, 7.30ಕ್ಕೆ ಷಟ್ಸ್ಥಲ ಧ್ವಜಾರೋಹಣ, ರಾಜೋಪಚಾರವನ್ನು ಭಕ್ತಿಭಾವದೊಂದಿಗೆ ನೆರವೇರಿಸಲಾಯಿತು.

ಬೆಳಿಗ್ಗೆ ಪ್ರಾತಃಕಾಲದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಶಿವಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದರು.

ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ದೇಶದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಆದರೆ, ಕೋವಿಡ್‌ ಕಾರಣದಿಂದ ಜಾತ್ರಾ ಮಹೋತ್ಸವಗಳಿಗೆ ತೊಂದರೆಯಾಗುತ್ತಿದೆ’ ಎಂದರು.

ಆದರೂ ನಮ್ಮ ಪರಂಪರೆ ಉಳಿಸಬೇಕಿದೆ. ಭಗವಂತ ಭಕ್ತರಿಗೆ ಆರೋಗ್ಯ ಭಾಗ್ಯ ನೀಡಲಿ. ದೇಶ, ರಾಜ್ಯಗಳು ಸಮೃದ್ಧಿಯಾಗಿ ಇರಲಿ ಎಂದು ಪೂಜೆ ನೆರವೇರಿಸಿ ರಥೋತ್ಸವ ನೆರವೇರಿಸಲಾಗಿದೆ ಎಂದು ತಿಳಿಸಿದರು.

ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿ, ‘ಆದಿನಿರ್ವಾಣ ಮಹಾ ಶಿವಯೋಗಿ ಅವರ ಆಶೀರ್ವಾದ ಭಕ್ತರ ಮೇಲೆ ಇರಲಿ. ಸದಾಕಾಲ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ, ಕೋವಿಡ್ ಬೇಗ ತೊಲಗಲಿ’ ಎಂದು ಆಶಿಸಿದರು.

ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಮುಮ್ಮಡಿ ನಿರ್ವಾಣ ಸ್ವಾಮೀಜಿ ಮತ್ತು ಭಕ್ತರ ಕೋರಿಕೆಯಂತೆ ಕೋವಿಡ್ ನಿಯಮಗಳನ್ನು ಪರಿಪಾಲಿಸುತ್ತ ದೇಗುಲ ಮಠದಲ್ಲಿ ರಥೋತ್ಸವ ನೆರವೇರಿಸಲಾಗಿದೆ’ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದಲ್ಲಿ ನಂದಿ ಧ್ವಜ, ವೀರಗಾಸೆ, ಪಟ ಕುಣಿತ ಮತ್ತು ಮಂಗಳವಾದ್ಯ ಸಹಿತ ಕಲಾ ಮೇಳದೊಂದಿಗೆ ರಥವನ್ನು ಮಠದ ಆವರಣದಲ್ಲಿ ಎಳೆಯಲಾಯಿತು.

ಅರುಣ್ ಸೋಮಣ್ಣ, ಶೈಲಜಾ ಸೋಮಣ್ಣ, ಆಡಳಿತಾಧಿಕಾರಿ ರಂಗನಾಥ್, ಮಠದ ಭಕ್ತರು, ಶಾಲಾ, ಕಾಲೇಜಿನ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT