ಸೋಮವಾರ, ಜನವರಿ 17, 2022
19 °C
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸಚಿವ ಅಶ್ವತ್ಥನಾರಾಯಣ ಭೇಟಿ

ರಾಮನಗರ ಜಿಲ್ಲೆಗೆ ವೈದ್ಯಕೀಯ ಸಿಬ್ಬಂದಿ ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೋವಿಡ್ ಮತ್ತು ಓಮೈಕ್ರಾನ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ತಕ್ಷಣವೇ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನೂತನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿನ ಕೋವಿಡ್ ಚಿಕಿತ್ಸಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಸಿಬ್ಬಂದಿ ಕೊರತೆಯ ವಿಷಯವನ್ನು ಅಲ್ಲಿನ ಅಧಿಕಾರಿಗಳು ಗಮನಕ್ಕೆ ತಂದರು. ಬೆಂಗಳೂರಿನ ವೈದ್ಯಕೀಯ ಮತ್ತು ಆರೋಗ್ಯ ಆಯುಕ್ತರೊಂದಿಗೆ ಮಾತನಾಡಿದ ಸಚಿವರು ಕ್ರಮಕ್ಕೆ ಸೂಚಿಸಿದರು.

ಸದ್ಯಕ್ಕೆ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೊರೊನಾ ಮತ್ತು ಓಮೈಕ್ರಾನ್ ಸೋಂಕು ಪತ್ತೆ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚು ಮಾಡಿ, ತ್ವರಿತ ಗತಿಯಲ್ಲಿ ಫಲಿತಾಂಶ ದೊರಕಿಸಿಕೊಂಡು, ಕೂಡಲೇ ಸೂಕ್ತ ಚಿಕಿತ್ಸೆ ಆರಂಭಿಸಬೇಕು. ಸಕಲ ವ್ಯವಸ್ಥೆಯನ್ನೂ ಮಾಡಿಕೊಂಡು, ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಅವರು ಹೇಳಿದರು.

ಕೊರೊನಾ ಮತ್ತು ಓಮೈಕ್ರಾನ್ ಸೋಂಕುಗಳನ್ನು ತಡೆಯಲು ಸರಿಯಾದ ಮುನ್ನೆಚ್ಚರಿಕೆ ಮತ್ತು ಪರೀಕ್ಷೆಗಳೇ ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಇದುವರೆಗೂ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅಂಥವರನ್ನು ಸಂಪರ್ಕಿಸಿ, ಅವರಿಗೆಲ್ಲ ಲಸಿಕೆ ಹಾಕಬೇಕು. 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಮತ್ತು 15 ರಿಂದ 18 ವರ್ಷಗಳ ಒಳಗೆ ಇರುವವರಿಗೆ ಲಸಿಕೆ ಕೊಡಲು ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು
ಹೇಳಿದರು.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯಕ್ಕೆ 66 ಸೋಂಕಿತರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅರ್ಹರಿಗೆ ಲಸಿಕೆ ಹಾಕಿರುವುದರಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ, ಸೋಂಕಿತರು ಹೆಚ್ಚಾಗುವ ಸಂಭವ ಇರುವುದರಿಂದ ಹಾಸಿಗೆಗಳ ಸಾಮರ್ಥ್ಯವನ್ನು ಅದಕ್ಕೆ ತಕ್ಕಂತೆ ಕೂಡಲೇ ಹೆಚ್ಚಿಸಿಕೊಳ್ಳಬೇಕು ಎಂದು ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು.

ದೇಶದಲ್ಲಿ ಈಗಾಗಲೇ 150 ಕೋಟಿ ಡೋಸ್ ಲಸಿಕೆಗಳನ್ನು ಹಾಕಲಾಗಿದ್ದು, ರಾಜ್ಯದಲ್ಲಿ ಈ ಸಂಖ್ಯೆ 9 ಕೋಟಿಯನ್ನು ದಾಟಿದೆ. ಆದ್ದರಿಂದ ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಮರೆಯುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಸರಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಶಿಧರ್, ಡಿ.ಎಲ್ ಒ ಡಾ ಮಂಜುನಾಥ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು