ಶನಿವಾರ, ಜನವರಿ 25, 2020
27 °C
ಕನ್ನಿಕಾ ಮಹಲ್‌ನಲ್ಲಿ ಗಮನ ಸೆಳೆದ ಆಹಾರ ಮೇಳ

ಬಾಯಲ್ಲಿ ನೀರೂರಿಸಿತು ‘ಅವರೆ’ ತಿನಿಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಾಯಲ್ಲಿ ನೀರೂರಿಸುವ ಅವರೆ ಬಾತ್‌, ಚಿತ್ರಾನ್ನ, ಹಿಚುಕಿದ ಅವರೆಕಾಯಿಯ ಗೊಜ್ಜು... ಅವರೆಯಿಂದಲೇ ಮಾಡಿದ ಪಾಯಸ, ನುಪ್ಪಟ್ಟು...

ಹೀಗೆ ಬಗೆಬಗೆಯ ಖಾದ್ಯಗಳ ಮಾರಾಟಕ್ಕೆ ನಗರದ ಕನ್ನಿಕಾ ಮಹಲ್‌ ಸಭಾಂಗಣ ಗುರುವಾರ ವೇದಿಕೆಯಾಗಿತ್ತು. ವಾಸವಿ ವನಿತಾ ಸಂಘದ ಆಶ್ರಯದಲ್ಲಿ ನಡೆದ ಅವರೆ ಮೇಳ ಆಹಾರ ಹಬ್ಬದಲ್ಲಿ ನಾನಾ ವಿಧದ ತಿನಿಸುಗಳ ಮಾರಾಟ ನಡೆಯಿತು.

ಅವರೆ ಕಾಯಿಯಿಂದಲೇ ತಯಾರಾದ ಆಹಾರ ಮೇಳ ಎನ್ನುವುದು ಇದರ ವಿಶೇಷವಾಗಿತ್ತು. ಆರು ಮಳಿಗೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಹಸಿ ಅವರೆ ಕಾಯಿ ಮಾಡಿದ್ದ ಪಾಯಸ, ಹಲ್ವ, ಹಿಚುಕು ಅವರೆಯಿಂದ ತಯಾರಾದ ಖಾರವಾದ ಗೊಜ್ಜಿನ ಜೊತೆಗೆ ಬಿಸಿ ದೋಸೆಯನ್ನು ಉಣಬಡಿಸಲಾಯಿತು. ಅವರೆ ಹೋಳಿಗೆಯೂ ಇತ್ತು. ಅವರೆ ಬೆರೆಸಿದ ಕೋಡುಬಳೆ, ಚಕ್ಕುಲಿ, ಪಾನಿಪುರಿ, ಸೂಪ್‌, ರೊಟ್ಟಿಯೂ ಜೊತೆಗಿತ್ತು.

‘ಸಂಘದ ವತಿಯಿಂದ ಕಳೆದ ವರ್ಷ ಆಯೋಜಿಸಿದ್ದ ರುಚಿ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಅವರೆಕಾಯಿ ಸೀಸನ್‌ ಇದ್ದು, ಅದರಿಂದ ತಯಾರಾದ ತಿನಿಸುಗಳ ಪ್ರದರ್ಶನಕ್ಕೆಂದೇ ವಿಶೇಷ ಮೇಳ ಆಯೋಜಿಸಿದ್ದೇವೆ. ಸಮುದಾಯದ ಮಹಿಳೆಯರು ಆಸಕ್ತಿಯಿಂದ ತಿಂಡಿ ತಯಾರಿಸಿ ಮಾರಾಟಕ್ಕೆ ಇಟ್ಟಿದ್ದಾರೆ’ ಎಂದು ವಾಸವಿ ವನಿತಾ ಸಂಘದ ಅಧ್ಯಕ್ಷೆ ಸುಧಾ ದರ್ಶನ್ ತಿಳಿಸಿದರು.

‘ಮೂವತ್ತಕ್ಕೂ ಹೆಚ್ಚು ಬಗೆಯ ತಿನಿಸುಗಳು ಇಲ್ಲಿ ಮಾರಾಟಕ್ಕೆ ಇವೆ. ಒಂದಕ್ಕಿಂತ ಒಂದು ರುಚಿಯಾಗಿವೆ. ಒಂದೇ ಕಡೆ ಇಷ್ಟು ಭಿನ್ನ ತಿನಿಸುಗಳು ಸಿಗುವುದು ಅಪರೂಪ’ ಎಂದು ಸಂಘದ ಖಜಾಂಚಿ ಪ್ರಭಾ ಶ್ರೀನಿವಾಸ ಹೇಳಿದರು.

ಮಧ್ಯಾಹ್ನ 1 ಗಂಟೆಗೆ ಆರಂಭವಾದ ಮೇಳವು ರಾತ್ರಿ 9ರವರೆಗೂ ನಡೆಯಿತು. ನೂರಾರು ಗ್ರಾಹಕರು ಭೇಟಿ ಕೊಟ್ಟು ತಿನಿಸು ಸವಿದರು. ‘ಖಾರ, ಸಿಹಿ ಸೇರಿದಂತೆ ಎಲ್ಲ ಬಗೆಯ ತಿನಿಸುಗಳು ಇವೆ. ಅದರಲ್ಲೂ ಮಹಿಳೆಯರು, ಮಕ್ಕಳಿಗೆ ಇಷ್ಟ ಆಗುವ ಪದಾರ್ಥಗಳಿವೆ. ರಾಮನಗರದಲ್ಲಿ ಇಂತಹದ್ದೊಂದು ಮೇಳ ನಡೆಯುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಮೇಳಕ್ಕೆ ಬಂದಿದ್ದ ವಾಣಿ ಹರ್ಷ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು