ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತಿನ ಕಾರಣ ತಿಳಿಸಿ: ಕಾರ್ಖಾನೆ ಅಧಿಕಾರಿಗಳಿಗೆ ಬಾಲಕೃಷ್ಣ ಒತ್ತಾಯ

Last Updated 16 ಫೆಬ್ರುವರಿ 2021, 3:18 IST
ಅಕ್ಷರ ಗಾತ್ರ

ರಾಮನಗರ: ‘ಟೊಯೊಟಾ ಕಾರ್ಮಿಕರ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಗುರುವಾರ ಸಂಸದ ಡಿ.ಕೆ. ಸುರೇಶ್‌ ನಿವಾಸದಲ್ಲಿ ಸಭೆ ನಡೆಯಲಿದೆ. ನಂತರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಸೂಚನೆಗಳನ್ನು ಟೊಯೊಟಾ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಯಾವುದೇ ಕಾರ್ಖಾನೆ ಕಾರ್ಮಿಕರನ್ನು ಹಲ್ಲೆ, ಲೈಂಗಿಕ ದೌರ್ಜನ್ಯ, ಕಳವು ಅಂತಹ ಗಂಭೀರ ಪ್ರಕರಣಗಳಲ್ಲಿ ಮಾತ್ರ ಅಮಾನತು ಇಲ್ಲವೇ ವಜಾ ಮಾಡಬಹುದು ಎಂದು ಕಾರ್ಮಿಕ ಕಾನೂನು ಹೇಳುತ್ತದೆ. ಟೊಯೊಟಾ ಯಾವ ಆರೋಪಗಳ ಮೇಲೆ ತನ್ನ ಕಾರ್ಮಿಕರನ್ನು ಅಮಾನತು ಮಾಡಿದೆ ಎಂದು ಸ್ಪಷ್ಟನೆ ನೀಡಬೇಕು. ಕಾರ್ಮಿಕರು ಇಂತಹ ಕೃತ್ಯ ಎಸಗಿದ್ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಜನರ ಮುಂದೆ ಇಡಬೇಕು’ ಎಂದು ಒತ್ತಾಯಿಸಿದರು.

‘ಕೇವಲ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದ್ದಕ್ಕೇ ಕಾರ್ಮಿಕರನ್ನು ಅಮಾನತು ಮಾಡಲಾಗಿದೆ. ಅವರನ್ನು ಸೇವೆಗೆ ಹಿಂಪಡೆಯುವ ವಿಚಾರದಲ್ಲಿ ಸರ್ಕಾರದ ಆದೇಶಕ್ಕೇ ಟೊಯೊಟಾ ಸಡ್ಡು ಹೊಡೆಯುತ್ತಿದೆ. ಕಾರ್ಮಿಕ ಮುಖಂಡರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಹೋರಾಟವೇ ಮಾಡಬಾರದು ಎಂದರೆ ಸರ್ಕಾರ ಎಲ್ಲ ಕಾರ್ಮಿಕ ಸಂಘಟನೆಗಳನ್ನು ಬ್ಯಾನ್‌ ಮಾಡಲಿ’ ಎಂದರು.

ಮಾತು ಹಿಂಪಡೆಯುವೆ: ‘ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಭರದಲ್ಲಿ ನಾನು ‘ತಾಕತ್ತಿದ್ದರೆ’ ಎಂಬ ಪದ ಬಳಸಿದ್ದೆ. ನಾನು ಆ ಮಾತನ್ನು ವಾಪಸ್ ಪಡೆಯುತ್ತೇನೆ. ಇಲ್ಲಿನ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಆ ತಾಕತ್ತು ಇದೆ. ಆದರೆ, ಅದನ್ನು ಕಾರ್ಮಿಕರ ಮೇಲೆ ತೋರಿಸಬೇಡಿ. ಕಾರ್ಮಿಕರ ಸಮಸ್ಯೆ ಬಗೆಹರಿಸಿದರೆ ಶಾಸಕರು, ಸಚಿವರನ್ನು ನಾವೇ ಸಾರೋಟಿನಲ್ಲಿ ಕೂರಿಸಿ ಬಿಡದಿಯಿಂದ ಕಾರ್ಖಾನೆವರೆಗೆ ಮೆರವಣಿಗೆ ಮಾಡುತ್ತೇವೆ’ ಎಂದು ಹೇಳಿದರು.

‘30 ಬಾರಿ ಮಧ್ಯಸ್ಥಿಕೆ ಸಭೆ ನಡೆಸಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. ಆದರೆ, ಅಷ್ಟು ಬಾರಿ ಸಭೆಗಳೇ ನಡೆದಿಲ್ಲ. ಕಾರ್ಮಿಕ ಮುಖಂಡರು ಒಮ್ಮೆ ಮಾತ್ರ ಸಭೆಗೆ ಗೈರಾಗಿದ್ದಾರೆ’ ಎಂದರು.

ತೆರಿಗೆ ಬಾಕಿ:‘ತನ್ನಿಂದ ₹ 18 ಸಾವಿರ ಕೋಟಿ ತೆರಿಗೆ ಸರ್ಕಾರಕ್ಕೆ ಸಂದಾಯ ಆಗಿರುವುದಾಗಿ ಟಿಕೆಎಂ ಆಡಳಿತ ಮಂಡಳಿ ಹೇಳಿದೆ. ಗ್ರಾಹಕರು ಕಟ್ಟಿದ ರಸ್ತೆ ತೆರಿಗೆಯನ್ನೂ ಲೆಕ್ಕ ಹಾಕಿದೆ. ಆದರೆ, ಕಾರ್ಖಾನೆಯು ಈವರೆಗೆ ಸರ್ಕಾರಕ್ಕೆ ₹ 3,723 ಕೋಟಿ ತೆರಿಗೆ ಹಾಗೂ ಅದರ ಬಡ್ಡಿ ₹ 900 ಕೋಟಿಯನ್ನು ಪಾವತಿಸಿಲ್ಲ. ಬದಲಾಗಿ ಸರ್ಕಾರ ತೆರಿಗೆ ವಿನಾಯಿತಿ ನೀಡುತ್ತಲೇ ಬಂದಿದೆ’ ಎಂದು ಆರೋಪಿಸಿದರು.

ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಚಕ್ಕೆರೆ, ಮುಖಂಡರಾದ ಡಿ.ಎಂ. ಮಹದೇವಯ್ಯ, ಚಂದ್ರಶೇಖರ್, ಉಮೇಶ್‌, ರಮೇಶ್‌, ಬಸವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT