ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಬೇಕು: ಎಡಿಜಿಪಿ ಅಲೋಕ್ ಕುಮಾರ್

Published 27 ಜೂನ್ 2023, 6:40 IST
Last Updated 27 ಜೂನ್ 2023, 6:40 IST
ಅಕ್ಷರ ಗಾತ್ರ

ರಾಮನಗರ: ‘ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಿಸುತ್ತಿಲ್ಲ. ಸಿಬ್ಬಂದಿ ಕಂಡರೆ ವಾಹನ ಸವಾರರಿಗೆ ಒಂದು ರೀತಿಯ ಭಯವಿರುತ್ತದೆ. ಕೂಡಲೇ ವಾಹನದ ವೇಗ ತಗ್ಗಿಸಿ, ಸಂಚಾರ ನಿಯಮ ಪಾಲಿಸುತ್ತಾರೆ. ಹಾಗಾಗಿ, ಕೂಡಲೇ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ಆರಂಭಿಸಬೇಕು’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇತ್ತೀಚೆಗೆ ಅಪಘಾತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಹೆದ್ದಾರಿ ಪರಿಶೀಲಿಸಿ ಬಳಿಕ ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.

ಹೆದ್ದಾರಿಯಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 158 ಜನ ಮೃತಪಟ್ಟ ಕುರಿತು ‘ಪ್ರಜಾವಾಣಿ’ ಜೂನ್ 23ರಂದು ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

‘ಬೆಂಗಳೂರಿನಿಂದ ಬೆಳಗಾವಿವರೆಗಿನ ಹೆದ್ದಾರಿಯಲ್ಲಿ ಒಬ್ಬ ಸಿಬ್ಬಂದಿ ಸಹ ಸಮವಸ್ತ್ರದಲ್ಲಿ ಕಾಣಿಸುವುದಿಲ್ಲ. ಪೊಲೀಸರು ಕೇವಲ ರಿಫ್ಲೆಕ್ಟ್ ಜಾಕೆಟ್ ಹಾಕಿಕೊಂಡು ರಸ್ತೆಯಲ್ಲಿದ್ದರೆ ಸಾಕು. ಅಪಘಾತಗಳ ಸಂಖ್ಯೆಯೂ ಇಳಿಮುಖವಾಗುತ್ತದೆ. ದಾವಣಗೆರೆಯಲ್ಲಿ ನಾನು ಎಸ್‌.ಪಿ ಆಗಿದ್ದಾಗ ಹೆದ್ದಾರಿಯಲ್ಲಿ ಗಸ್ತು ಮಾಡಿಯೇ ಶೇ 40ರಷ್ಟು ಅಪಘಾತ ತಗ್ಗಿಸಿದ್ದೆ’ ಎಂದರು.

ಕುಂಬಳಗೋಡಿನಿಂದ ಚನ್ನಪಟ್ಟಣ ತಾಲ್ಲೂಕಿನ ನಿಡಘಟ್ಟವರೆಗೆ ಹೆದ್ದಾರಿಯಲ್ಲಿಯ 18 ಅಪಘಾತ ಸ್ಥಳ ಪರಿಶೀಲಿಸಿದ ಅವರು, ಸ್ಥಳೀಯ ಪೊಲೀಸರಿಂದ ಅಪಘಾತ ಮಾಹಿತಿ ಪಡೆದರು. ಕೆಲವೆಡೆ ಸಾರ್ವಜನಿಕರ ದೂರು ಆಲಿಸಿ, ಹೆದ್ದಾರಿ ಗಸ್ತಿಗೆ ನಿಯೋಜಿಸಿರುವ ವಾಹನಗಳನ್ನು ವೀಕ್ಷಿಸಿದರು.

ಕೇಂದ್ರ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಎಎಸ್‌ಪಿ ಟಿ.ವಿ. ಸುರೇಶ್ ಜೊತೆಗಿದ್ದರು.

ಹೆದ್ದಾರಿ ನಿರ್ವಹಣೆ ಮತ್ತು ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪಾಲನೆ ಮಾಡದಿದ್ದರೆ ನಾವು ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ
– ಅಲೋಕ್ ಕುಮಾರ್ ಎಡಿಜಿಪಿ
ಎಡಿಜಿಪಿ ಅವರು ಹೆದ್ದಾರಿ ನಿರ್ವಹಣೆ ಕುರಿತು ನೀಡಿರುವ ಸೂಚನೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅಪಘಾತ ತಡೆಗೆ ಕ್ರಮ ಕೈಗೊಳ್ಳಲಾಗುವುದು
– ರಾಹುಲ್ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಚಾಲನಾ ಪರವಾನಗಿ ಮುಟ್ಟುಗೋಲು ಚಿಂತನೆ 

‘ಐದೂವರೆ ತಿಂಗಳಲ್ಲಿ ಹೆದ್ದಾರಿಯಲ್ಲಿ 122 ಜನ ಸತ್ತಿರುವುದು ಆಘಾತಕಾರಿ. ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಅತಿ ವೇಗದ ಚಾಲನೆ ಮಾಡುವವರ ಮತ್ತು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಚಾಲನಾ ಪರವಾನಗಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ. ವೇಗ ಅಳೆಯಲು ಸ್ಪೀಡ್ ರೇಡಾರ್‌ ಹಾಕಲಾಗುವುದು’ ಎಂದು ಅಲೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ‘ಹೆದ್ದಾರಿಯಲ್ಲಿ ಅಪಘಾತ ಸ್ಥಳಗಳು ಅಂಕುಡೊಂಕು ಮಾರ್ಗ ಪ್ರವೇಶ ಮತ್ತು ನಿರ್ಗಮನ ದಾರಿ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ಇರುವ ವ್ಯವಸ್ಥೆ ಪರಿಶೀಲಿಸಿದ್ದೇನೆ. ಅಗತ್ಯ ಇರುವೆಡೆ ಸೂಚನಾ ಫಲಕ ಅಳವಡಿಕೆ ಹೆದ್ದಾರಿ ಗಸ್ತು ಆಂಬುಲೆನ್ಸ್ ವ್ಯವಸ್ಥೆ ಹಾಗೂ ಜನ ರಸ್ತೆ ದಾಟಲು ಅಂಡರ್‌ಪಾಸ್ ಮತ್ತು ಸ್ಕೈವಾಕ್ ನಿರ್ಮಿಸುವಂತೆ ಪ್ರಾಧಿಕಾರದ ಅಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT