ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ 15, 16ರಂದು ಮುಷ್ಕರ

Last Updated 3 ಮಾರ್ಚ್ 2021, 15:36 IST
ಅಕ್ಷರ ಗಾತ್ರ

ರಾಮನಗರ: ‘ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಇದೇ 15–16ರಂದು ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ವೇದಿಕೆ ವತಿಯಿಂದ ರಾಷ್ಟದಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್‌ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು’ ಎಂದು ಬಿಇಎಫ್‌ಎಸ್ ಮುಖಂಡ ಬಿ.ಎಂ. ಮಾಧವ ಮನವಿ ಮಾಡಿದರು.

ಬ್ಯಾಂಕ್‌ ನೌಕರರ ಸಂಘಟನೆಗಳ ಐಕ್ಯ ವೇದಿಕೆ ವತಿಯಿಂದ ನಗರದ ಲೀಡ್‌ ಬ್ಯಾಂಕ್‌ ಕಚೇರಿ ಎದುರು ಬುಧವಾರ ಸಂಜೆ ನಡೆದ ಬ್ಯಾಂಕ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ಧರಣಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ನಷ್ಟದಲ್ಲಿ ಇರುವ ಬ್ಯಾಂಕುಗಳ ವಿಲೀನ ನೆಪದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡಲು ಹೊರಟಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಲುಪಿಸುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳು ದೇಶದ ಅರ್ಥ ವ್ಯವಸ್ಥೆ ಸುಧಾರಣೆಗೆ ಶ್ರಮಿಸಿವೆ. ಹೀಗಿರುವಾಗ ಇವುಗಳನ್ನು ಖಾಸಗಿಯವರ ವಶಕ್ಕೆ ಒಪ್ಪಿಸಿದಲ್ಲಿ ಸಾರ್ವಜನಿಕ ಆಸ್ತಿಗಳ ಲೂಟಿ ಆಗಲಿದೆ. ಕೋಟ್ಯಂತರ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಉದ್ಯೋಗಾವಕಾಶಗಳು ಕಡಿಮೆ ಆಗಲಿದ್ದು, ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಆಗಲಿದೆ. ಮುಖ್ಯವಾಗಿ ಜನಸಾಮಾನ್ಯರು ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತ ಆಗಲಿದ್ದಾರೆ’ ಎಂದು ದೂರಿದರು.

‘ಬ್ಯಾಂಕ್‌ ಸಿಬ್ಬಂದಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ದೇಶಪ್ರೇಮ ಹೊಂದಿರುವ ಪ್ರತಿಯೊಬ್ಬರು ಬ್ಯಾಂಕುಗಳ ರಕ್ಷಣೆಗಾಗಿ ನಡೆದಿರುವ ಈ ಹೋರಾಟವನ್ನು ಬೆಂಬಲಿಸಬೇಕು’ ಎಂದು ಬ್ಯಾಂಕ್‌ ವಲಯದ ಕಾರ್ಮಿಕ ಮುಖಂಡರು ಮನವಿ ಮಾಡಿದರು.

ಬಿಇಎಫ್‌ಎಸ್ ಮುಖಂಡ ಕೆ. ನಾಗರಾಜ ಶ್ಯಾನುಭೋಗ, ಎಐಬಿಯುಎ ಮುಖಂಡ ಸುರೇಂದ್ರ, ಬಿಇಎಫ್‌ಐ ಉಪಾಧ್ಯಕ್ಷ ಮಹದೇವು ಮೊದಲಾದವರು ಮಾತನಾಡಿದರು. ಕೆನರಾ ಬ್ಯಾಂಕ್ ಕಾರ್ಮಿಕ ಒಕ್ಕೂಟದ ವೆಂಕಟೇಶ್‌, ಅಖಿಲ ಭಾರತ ಮೋಟಾರ್ ಚಾಲಕರ ಸಂಘದ ಶಿವರುದ್ರಯ್ಯ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT