ಸೋಮವಾರ, ಸೆಪ್ಟೆಂಬರ್ 26, 2022
20 °C
ಕೊರೊನಾ ವಾರಿಯರ್ಸ್‌ಗೆ ಆಹಾರ ಕಿಟ್‌ ವಿತರಣೆ

ಸೋಂಕು ಮಕ್ಕಳಿಗೆ ಹರಡದಂತೆ ಎಚ್ಚರವಹಿಸಿ: ವೈದ್ಯೆ ಡಾ.ಪುಣ್ಯವತಿ ನಾಗರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಕೋವಿಡ್‌ ಮೂರನೇ ಅಲೆಯು ದೊಡ್ಡವರಿಗಿಂತ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ. ಮಕ್ಕಳನ್ನು ನಿಯಂತ್ರಿಸುವುದು ಕಷ್ಟವಿರುವುದರಿಂದ ಅವರಿಗೆ ಸೋಂಕು ತಗುಲದಂತೆ ಪೋಷಕರು ಹೆಚ್ಚಿನ ಜಾಗೃತಿವಹಿಸಬೇಕು ಎಂದು ಪುಣ್ಯ ಆಸ್ಪತ್ರೆಯ ವೈದ್ಯೆ ಡಾ.ಪುಣ್ಯವತಿ ನಾಗರಾಜು ಸಲಹೆ ನೀಡಿದರು.

ಇಲ್ಲಿನ ಮೇಗಳಬೀದಿ ಜಿಹ್ನೇಶ್ವರಿ ಸಮುದಾಯ ಭವನದಲ್ಲಿ ನಗರಸಭೆ ಸದಸ್ಯ ಸ್ಟುಡಿಯೊ ಚಂದ್ರು ವಿವಿಧ ದಾನಿಗಳಿಂದ ಕೋವಿಡ್‌ನಲ್ಲಿ ಕೊರೊನಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸಿದ ಆಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನಗರಸಭೆ ಸಿಬ್ಬಂದಿಗೆ ಸೋಮವಾರ ನಡೆಸಿಕೊಟ್ಟ ಉಚಿತವಾಗಿ ರೇಷನ್‌ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೋಂಕು ಪ್ರತಿ ಅಲೆಯಲ್ಲೂ ತನ್ನ ರೂಪ ಬದಲಿಸುತ್ತಾ ಹೋಗುತ್ತಿದೆ. ಹಂತ ಹಂತಕ್ಕೂ ಹೆಚ್ಚು ಶಕ್ತಿಶಾಲಿಯಾಗುತ್ತಿದೆ. ಎರಡನೇ ಅಲೆಯಲ್ಲಿ ಮನುಷ್ಯರ ದೇಹದ ಮೇಲೆ ತೀವ್ರತರ ಪರಿಣಾಮ ಬೀರಿ ಸೋಂಕಿತರು ಎಚ್ಚೆತ್ತುಕೊಳ್ಳುವುದಕ್ಕೂ ಮೊದಲೇ ಅವರ ಜೀವವನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ನಮ್ಮ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದರು.

ಮೂರನೇ ಅಲೆಯು ಮಕ್ಕಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಅಧ್ಯಯನದಿಂದ ಗೊತ್ತಾಗಿದೆ. 18 ವರ್ಷ ಮೇಲ್ಪಟ್ಟವರೇ ಹೆಚ್ಚು ಹೊರಗಡೆ ಹೋಗುವುದರಿಂದ ಎಲ್ಲರೂ ವ್ಯಾಕ್ಸಿನ್‌ ತೆಗೆದುಕೊಂಡರೆ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ಮಕ್ಕಳನ್ನು ಈ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಹೋಗದಂತೆ ಪೋಷಕರು ನೋಡಿಕೊಳ್ಳಬೇಕಿದೆ ಎಂದು ಎಚ್ಚರಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ. ನಂದಿನಿ ಮಾತನಾಡಿ, ಸೋಂಕು ತಡೆ ಹೋರಾಟದಲ್ಲಿ ಪ್ರಾರಂಭದಲ್ಲಿ ಸ್ವಲ್ಪ ಗೊಂದಲವಾಯಿತು. ನಂತರದಲ್ಲಿ ಆರೋಗ್ಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನಗರಸಭೆ ಮತ್ತು ಪಂಚಾಯಿತಿಯವರು ಆರೋಗ್ಯ ಇಲಾಖೆಯ ಸಹಾಯಕ್ಕೆ ಬಂದು ಎಲ್ಲವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಪರಸ್ಪರ ಸಹಕಾರ ಇರುವುದರಿಂದ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದು ತಿಳಿಸಿದರು.

ಈ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಅತಿಮುಖ್ಯ. ಸೋಂಕು ಬಂದಾಗ ಯಾರು ಭಯಪಡಬೇಕಿಲ್ಲ. ಆರೋಗ್ಯ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ನಿಮ್ಮ ಹಾಗೂ ಕುಟುಂಬವನ್ನು ನಾವು ರಕ್ಷಣೆ ಮಾಡುತ್ತೇವೆ ಎಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಮಾತನಾಡಿ, ಸಾಮಾಜಿಕ ವಿಪತ್ತುಗಳ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಟ್ಟಾಗಬೇಕು. ಆಗ ಮಾತ್ರ ನಾವು ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಸಂಕಷ್ಟದಲ್ಲಿ ದುಡಿದವರನ್ನು ಸ್ಮರಿಸುವುದು ಮುಖ್ಯ ಎಂದು ಹೇಳಿದರು.

ಸಿಡಿಪಿಒ ಮಂಜುನಾಥ್‌, ನಗರಸಭೆ ಎಂಜಿನಿಯರ್‌ ಪಾರ್ವತಿ, ಸಾರ್ವಜನಿಕ ಆಸ್ಪತ್ರೆ ಎಎಂಒ ಡಾ.ವಾಸು, ಅರ್ಬನ್‌ ಆಸ್ಪತ್ರೆಯ ವೈದ್ಯೆ ಡಾ.ಲೀನಾ ಮಾತನಾಡಿದರು. ಡಾ.ಶರತ್‌, ಮುಖ್ಯಶಿಕ್ಷಕ ರಾಮು, ನಗರಸಭೆ ಹೆಲ್ತ್‌ ಇನ್‌ಸ್ಪೆಕ್ಟರ್‌ ವೆಂಕಟೇಶ್‌, ಕುಸುಮಾ, ಆರೋಗ್ಯ ಇಲಾಖೆಯ ಪುಟ್ಟಸ್ವಾಮಿ, ರೋಹಿತ್‌, ಮುಖಂಡರಾದ ಬಂಡಿ ನಾಗರಾಜು, ಮಹದೇವು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು