ಬುಧವಾರ, ಮೇ 18, 2022
25 °C

ಮನುವಾದ ವಿರುದ್ಧ ಜಾಗೃತರಾಗಿ: ವಿಧಾನ ಪರಿಷತ್ ಸದಸ್ಯ ಎಸ್. ರವಿ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ನಾವೆಲ್ಲರೂ ಸಮಾಜವನ್ನು ಎಚ್ಚರಗೊಳಿಸಬೇಕು. ಇಲ್ಲವಾದರೆ ಮತ್ತೆ ಮನುವಾದ ಎಚ್ಚರಗೊಂಡು ಶೋಷಣೆಗೆ ಒಳಗಾಗಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿದರು.

ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಸಮಾಜದಲ್ಲಿ ಸಮಾನತೆ ಸಾಧಿಸಲು ಹೋರಾಟ ನಡೆಸಿ ಸಂವಿಧಾನ ರಚಿಸಿದ್ದಾರೆ. ಆದರೆ, ಅದನ್ನು ಬದಲಾಯಿಸಿ ನಮ್ಮ ಹಕ್ಕನ್ನು ಕೇವಲ ಶೇ 3ರಷ್ಟು ಜನರು ಕಸಿದುಕೊಳ್ಳಲು ಹೊರಟಿದ್ದಾರೆ. ಅವರು ಮಾಂಸ ಸೇವನೆ ಮಾಡದೆ ಬಹುಸಂಖ್ಯಾತರಾದ ನಾವು ಯಾವ ಆಹಾರವನ್ನು ಯಾವ ರೀತಿ ಸೇವನೆ ಮಾಡಬೇಕೆಂದು ತೀರ್ಮಾನಿಸುತ್ತಿದ್ದಾರೆ. ಈಗಲೂ ನಾವು ಎಚ್ಚೆತ್ತಕೊಳ್ಳದಿದ್ದರೆ ಮತ್ತೆ ಮನುವಾದ ಈ ಸಮಾಜವನ್ನು ಆವರಿಸಿಕೊಳ್ಳಲಿದೆ ಎಂದು ಎಚ್ಚರಿಸಿದರು.

ಪ್ರಪಂಚದಲ್ಲೇ ವಿಶೇಷವಾದ ಸಂವಿಧಾನ ರಚಿಸಿ ಭಾರತಕ್ಕೆ ಗೌರವ ತಂದುಕೊಟ್ಟವರು ಅಂಬೇಡ್ಕರ್‌. ಅವರ ಗೌರವಕ್ಕೆ ಅಗೌರವ ತರುವ ಕೆಲಸ ಈಗ ಸಮಾಜದಲ್ಲಿ ನಡೆಯುತ್ತಿದೆ. ಅದಕ್ಕೆ ನಾವು ಅವಕಾಶ ಕೊಡಬಾರದು ಎಂದರು.

ಜಾತಿ, ಅಸ್ಪೃಶ್ಯತೆ ಹೆಸರಲ್ಲಿ ವ್ಯವಸ್ಥೆಯು ದಲಿತರನ್ನು ನಡೆಸಿಕೊಂಡಿದೆ. ಇದರ ವಿರುದ್ಧ ದೇಶದಲ್ಲಿ ದೊಡ್ಡ ಹೋರಾಟವೇ ನಡೆದಿದೆ. ಮುಂದೆ ಎಲ್ಲರೂ ಸಮಾನತೆ ಯಿಂದ ಒಟ್ಟಾಗಿ ಬಾಳುವಂತೆ ಸಮ ಸಮಾಜ ಸೃಷ್ಟಿಯಾಗಬೇಕಿದೆ ಎಂದರು.

ತಹಶೀಲ್ದಾರ್ ವಿ.ಆರ್‌. ವಿಶ್ವನಾಥ್ ಮಾತನಾಡಿ, ಅಂಬೇಡ್ಕರ್ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅದು ಆಗಬಾರದು. ಸಂವಿಧಾನವನ್ನು ಓದಿದಾಗ ಮಾತ್ರ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಅರ್ಥವಾಗುತ್ತವೆ ಎಂದು ತಿಳಿಸಿದರು.

ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲಾ ಸಮುದಾಯಗಳ ಧ್ವನಿಯಾಗಿ ಸಮಾನತೆಯ ಸಮಾಜಕ್ಕಾಗಿ ಬೃಹತ್ ಸಂವಿಧಾನವನ್ನು ಕೊಟ್ಟಿದ್ದಾರೆ. ಇದು ಒಂದು ಸಮುದಾಯ, ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮ, ಭಾಷಿಕರಿಗೂ ಸಂವಿಧಾನದಡಿ ಅವಕಾಶ, ರಕ್ಷಣೆ ದೊರೆತಿದೆ. ಹಾಗಾಗಿ, ಅಂಬೇಡ್ಕರ್‌ ಅವರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಮೀಸೆ ವೆಂಕಟೇಶ್, ಪೌರಾಯುಕ್ತೆ ಬಿ. ಶುಭಾ, ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ, ಸಿಪಿಐ ಟಿ.ಟಿ. ಕೃಷ್ಣ, ಪಿಎಸ್‌ಐಗಳಾದ ಹೇಮಂತ್ ಕುಮಾರ್, ಉಷಾ ನಂದಿನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು