ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಪಥ ಸಂಚಲನ ಆರಂಭ

Last Updated 9 ಫೆಬ್ರುವರಿ 2020, 18:58 IST
ಅಕ್ಷರ ಗಾತ್ರ

ರಾಮನಗರ: ‘ಕನಕಪುರದ ಮುನೇಶ್ವರ ಬೆಟ್ಟದಲ್ಲಿ (ಕಪಾಲ ಬೆಟ್ಟ)ಯೇಸು ಪ್ರತಿಮೆ ಕಾಮಗಾರಿ ತೆರವು ಮತ್ತು ಜಮೀನು ವಾಪಸ್ ಪಡೆಯುವ ಸಂಬಂಧ ರಾಜ್ಯ ಸರ್ಕಾರಕ್ಕೆ ಯಾವುದೇ ಗಡುವು ನೀಡಿಲ್ಲ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿದರು.

ಈಚೆಗೆ ಕನಕಪುರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇದಿಕೆಯಲ್ಲಿ ಜಮೀನು ವಾಪಸ್‌ಗೆ ಜನವರಿ 25ರ ಗಡುವು ನೀಡುವುದಾಗಿ ಅವರು ಹೇಳಿದ್ದರು. ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಲ್ಲಡ್ಕ ‘ನಾವು ಜ.25ರ ಬಳಿಕ ಸಭೆ ಮಾಡುತ್ತೇವೆ ಎಂದಿದ್ದೆವು ಹೊರತು ಸರ್ಕಾರಕ್ಕೆ ಗಡುವು ನೀಡಿರಲಿಲ್ಲ. ಅಧಿಕಾರಿಗಳಿಂದ ವರದಿ ಪಡೆದು ಜಮೀನು ಹಿಂದಕ್ಕೆ ಪಡೆಯಲು ಅದರದ್ದೇ ಆದ ನಿಯಮಾವಳಿಗಳು ಇರುತ್ತವೆ. ಸರ್ಕಾರ ತನ್ನ ಪಾಲಿನ ಕೆಲಸ ಮಾಡುತ್ತಿದೆ’ ಎಂದು ಸಮರ್ಥಿಸಿಕೊಂಡರು. ‘ಮುನಿಸ್ವಾಮಿಗೆ ಸಿಗಬೇಕಾದ ಗೌರವ ಸಿಕ್ಕೇ ಸಿಗುತ್ತದೆ. ಆ ಬೆಟ್ಟ ಮುನೇಶ್ವರನ ಬೆಟ್ಟವಾಗಿಯೇ ಉಳಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ಪಥ ಸಂಚಲನದ ಕುರಿತು ಶಾಸಕ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್‌ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಸಮಾಜದಲ್ಲಿ ಶಾಂತಿ ಕದಡಿದ್ದು ಯಾರು? ಕಳೆದ ಮೂರು ದಶಕಗಳಿಂದ ಕಾನೂನು ಮೀರಿ ಕೆಲಸ ಮಾಡಿದ್ದು ಯಾರು? ಜೈಲಿಗೆ ಹೋಗಿದ್ದು ಯಾರು?’ ಎಂದು ಮರು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸಂಸದರಿರುವ ಏಕೈಕ ಕ್ಷೇತ್ರದ ಮೇಲೆ ಆರ್‌ಎಸ್‌ಎಸ್‌ ಕಣ್ಣಿಟ್ಟಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ ‘ನಾವು ಇಲ್ಲಿ ಎಂ.ಪಿ. ಸೀಟಿಗಾಗಿ ಕೆಲಸ ಮಾಡುತ್ತಿಲ್ಲ. ಹಿಂದು ಸಮಾಜದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇವೆ’ ಎಂದರು.

ಆರ್‌ಎಸ್‌ಎಸ್‌ನವರಿಗೆ ನಾನೇ ಊಟ ಹಾಕಿಸುತ್ತೇನೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ ‘ಇಂಥ ದುರುಳರ ಭಿಕ್ಷೆ ನಮಗೆ ಬೇಕಿಲ್ಲ. ಮೋಸ, ವಂಚನೆಯಿಂದ ಅಧಿಕಾರ ನಡೆಸಿದವರ ಬಳಿ ನಾನು ಅನ್ನ ಕೇಳುವುದಿಲ್ಲ’ ಎಂದರು.

ಪಥ ಸಂಚಲನ: ಶಿವಕುಮಾರ್ ಟೀಕೆ

ಪಥ ಸಂಚಲನ ಕುರಿತು ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಡಿ.ಕೆ. ಶಿವಕುಮಾರ್ ‘ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿಗೆ ನಮ್ಮ ಒಂದು ಕ್ಷೇತ್ರದ ಗೆಲುವನ್ನು ಸಹಿಸಲು ಆಗುತ್ತಿಲ್ಲ. ಅವರು ಚಡ್ಡಿ, ಪ್ಯಾಂಟ್‌, ಪಂಚೆ ಯಾವುದೇ ವೇಷ ತೊಟ್ಟು ಪಥ ಸಂಚಲನ ಮಾಡಿದರೂ ನಾವು ಹೆದರುವುದಿಲ್ಲ’ ಎಂದಿದ್ದರು.

‘ಆರ್‌ಎಸ್‌ಎಸ್‌ ಸಿದ್ಧಾಂತ ಏನು ಎಂಬುದು ನನಗೆ ಗೊತ್ತಿದೆ. ಬಿಜೆಪಿಯವರು ತಾವು ಹೇಳಲಾಗದ್ದನ್ನು ಆರ್‌ಎಸ್‌ಎಸ್‌ ಮೂಲಕ ಮಾಡಿಸುತ್ತಿದ್ದಾರೆ. ನಾವು ಮತ್ತು ಜೆಡಿಎಸ್‌ನವರು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದರೆ ಬಿಜೆಪಿ 10 ಸ್ಥಾನ ಗೆಲ್ಲಲು ಆಗುತ್ತಿರಲಿಲ್ಲ. ತಪ್ಪನ್ನು ಸರಿ ಮಾಡಿಕೊಳ್ಳುತ್ತೇವೆ’ ಎಂದರು.

‘ಆರ್‌ಎಸ್‌ಎಸ್‌ನವರು ಹೇಳಿದ್ದರೆ ನಾನೇ ಅವರಿಗೆ ಊಟ ಹಾಕಿಸಿ ಬೇಕಾದ ಸೌಲಭ್ಯ ಮಾಡಿಕೊಡುತ್ತಿದ್ದೆ. ಮೆರವಣಿಗೆಗೆ ಕಾರ್ಯಕರ್ತರನ್ನೂ ಕಳುಹಿಸಿಕೊಡುತ್ತಿದ್ದೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT