ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂಕ್ರಾಮಿಕ ರೋಗ ಹರಡದಂತೆ ಜಾಗೃತಿ ವಹಿಸಿ’

Last Updated 9 ಜುಲೈ 2019, 13:51 IST
ಅಕ್ಷರ ಗಾತ್ರ

ಚನ್ನಪಟ್ಟಣ: ಸಕಾಲದಲ್ಲಿ ಮಳೆಯಾಗದ ಪರಿಣಾಮ ಎದುರಾಗುವ ಸಮಸ್ಯೆಗಳ ಬಗ್ಗೆ ಆಯಾಯ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಜಾಗೃತಿ ವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳು ಹಾಗೂ ಪಿಡಿಒಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ವಾಡಿಕೆಯಂತೆ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕ್ಷಿಣಿಸಿದೆ. ಜನ, ಜಾನುವಾರು ಮೇಲೆ ಇದರ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ ಎಂದರು.

ಮುಂಜಾಗ್ರತೆಯಾಗಿ ಪಿಡಿಒ ಹಾಗೂ ಸಿಬ್ಬಂದಿ, ಜನಪ್ರತಿನಿಧಿಗಳು, ಸ್ವಯಂಸೇವಾ ಸಂಘ –ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಕುಡಿಯುವ ನೀರಿನ ಪೂರೈಕೆ ಮಾಡುವಾಗ ಪ್ರತಿ ಗ್ರಾಮದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಶುದ್ಧ ನೀರಿನ ಸರಬರಾಜು ಸೇರಿದಂತೆ ಹಲವು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಟಿ.ರಾಜು ಮಾತನಾಡಿ, ಪ್ರತಿಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಾರಣಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಇಒ ರಾಮಕೃಷ್ಣ ಮಾತನಾಡಿ, ಜುಲ್ಯೆ ತಿಂಗಳು ಅರ್ಧ ಕಳೆದಿದ್ದರೂ ವಾಡಿಕೆಯಂತೆ ಮಳೆಯಾಗದಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದರು.

ಪಿಡಿಒಗಳು ಹಾಗೂ ಕೆಲ ಇಲಾಖಾ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT