ರಾಮನಗರ: ನಗರದ ಅರಳೆಪೇಟೆಯಲ್ಲಿರುವ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಭಾರತ್ ವಿಕಾಸ್ ಪರಿಷತ್ ವಾಲ್ಮೀಕಿ ಶಾಖೆ ವತಿಯಿಂದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಮತ್ತು ಭಾರತ್ ಕೋ ಜಾನು (ಭಾರತದ ಬಗ್ಗೆ ತಿಳಿಯಿರಿ) ರಸಪ್ರಶ್ನೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಷತ್‌ನ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಮೋಹನ್, ‘ಸೇವಾ ಕಾರ್ಯಗಳ ಮೂಲಕ ಭಾರತ್ ವಿಕಾಸ್ ಪರಿಷತ್ ಪರಿಚಿತವಾಗಿದೆ. ಆರೋಗ್ಯ ತಪಾಸಣೆ ಶಿಬಿರಗಳು, ನೇತ್ರ ಶಸ್ತ್ರಚಿಕಿತ್ಸೆ, ಅಂಗವಿಕಲರ ಆರೋಗ್ಯ ಪರೀಕ್ಷೆ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಹೆಗ್ಗಳಿಕೆ ಪರಿಷತ್‌ನದ್ದಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾ.ಶಿ. ಬಸವರಾಜ್, ‘ಪರಿಷತ್ ವಾಲ್ಮೀಕಿ ಶಾಖೆಯು 1992ರಲ್ಲಿ ಪ್ರಾರಂಭವಾಗಿ 32 ವರ್ಷಗಳಿಂದ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದೀಗ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 22 ಶಾಲೆಗಳ 400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿಂದಿ ಮತ್ತು ಸಂಸ್ಕೃತ ವಿಭಾಗದಲ್ಲಿ ಬಿಜಿಎಸ್ ಅಂಧರ ಶಾಲೆ ಪ್ರಥಮ ಸ್ಥಾನ ಪಡೆದು ಪ್ರಾಂತ್ಯಮಟ್ಟಕ್ಕೆ ಆಯ್ಕೆಯಾಯಿತು. ಎರಡನೇ ಬಹುಮಾನವನ್ನು ಹಿಂದಿಯಲ್ಲಿ ಕಿಂಗ್ ಸ್ಟನ್ ಇಂಟರ್‌ನ್ಯಾಷನಲ್ ಸ್ಕೂಲ್ ಹಾಗೂ ಮೂರನೇ ಬಹುಮಾನ ಸಂಸ್ಕೃತದಲ್ಲಿ ಎಂ.ಎಚ್. ಇಂಟರ್‌ನ್ಯಾಷನಲ್ ಸ್ಕೂಲ್ ಪಡೆಯಿತು.
ಕನ್ನಡ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಥಮ, ಬಿಜಿಎಸ್ ಅಂಧರ ಶಾಲೆ ದ್ವಿತೀಯ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು. ಜನಪದ ಗೀತೆಯಲ್ಲಿ ಎಂ.ಎಚ್. ಶಾಲೆ ಪ್ರಥಮ, ಸರ್ಕಾರಿ ಪ್ರೌಢಶಾಲೆ ದ್ವಿತೀಯ ಹಾಗೂ ಕಿಂಗ್‌ಸ್ಟನ್ ಶಾಲೆ ತೃತೀಯ ಸ್ಥಾನ ಗಳಿಸಿದವು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಯೋಗಾನಂದ, ಭಾರತ್ ವಿಕಾಸ್ ಕಣ್ವ ಶಾಖೆ ಅಧ್ಯಕ್ಷ ಗುರುಮಾದಯ್ಯ, ಸಂಚಾಲಕ ಎಚ್.ವಿ. ಶೇಷಾದ್ರಿ ಅಯ್ಯರ್, ಗಾಯನ ಸ್ಪರ್ಧೆ ಸಂಚಾಲಕ ಪ್ರೊ.ಎಸ್.ಎಲ್. ವನರಾಜು, ರಸಪ್ರಶ್ನೆ ಸಂಚಾಲಕ ಕೆ.ಎನ್. ಮಹೇಶ್, ಕಾರ್ಯದರ್ಶಿ ಕೆ.ಎಚ್. ಚಂದ್ರಶೇಖರಯ್ಯ, ಕೋಶಾಧಿಕಾರಿ ಎಸ್. ವೆಂಕಟಪ್ಪ, ತೀರ್ಪುಗಾರರಾದ ಝಾನ್ಸಿರಾಣಿ ಮತ್ತು ರಾಜೇಶ್ವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.