ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | BJP ಅಭ್ಯರ್ಥಿ ಡಾ. ಮಂಜುನಾಥ್ ಪರ ಮತಯಾಚನೆ: ಶಾ ರೋಡ್ ಷೋ ಏ. 2ರಂದು

Published 30 ಮಾರ್ಚ್ 2024, 13:27 IST
Last Updated 30 ಮಾರ್ಚ್ 2024, 13:27 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಣವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಸಿ .ಎನ್. ಮಂಜುನಾಥ್ ಪರವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಏಪ್ರಿಲ್ 2ರಂದು ಚನ್ನಪಟ್ಟಣದಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಲಿದ್ದಾರೆ.

ಮಾರ್ಚ್ 28ರಂದು ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಬೃಹತ್ ರ‍್ಯಾಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿದ್ದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ವಿವಿಧ ನಾಯಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣದಲ್ಲಿ ಶಾ ರೋಡ್ ಷೋ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ.

ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು, ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆ ಮುಗಿಸಿಕೊಂಡು ಸಂಜೆ 6 ಗಂಟೆ ಸುಮಾರಿಗೆ ಚನ್ನಪಟ್ಟಣಕ್ಕೆ ಬಂದು ರೋಡ್ ಷೋ ನಡೆಸಲಿದ್ದಾರೆ. ಈ ಕುರಿತು ಬಿಜೆಪಿ ಮುಖಂಡರು ಸಹಾಯಕ ಚುನಾವಣಾಧಿಕಾರಿ ಮತ್ತು ಪೊಲೀಸರ ಅನುಮತಿ ಪಡೆದಿದ್ದಾರೆ.

ತೆರದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್ ಷೋ ನಡೆಸಲಿರುವ ಅಮಿತ್ ಶಾ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರಿಗೆ ಅಭ್ಯರ್ಥಿ ಮಂಜುನಾಥ್, ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಾಥ್ ನೀಡಲಿದ್ದಾರೆ. ಜಿಲ್ಲೆಯಾದ್ಯಂತ ಎರಡೂ ಪಕ್ಷಗಳ ಕಾರ್ಯಕರ್ತರು ಅಂದು ರೋಡ್‌ ಷೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT