ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಭ್ಯರ್ಥಿಯಿಂದ ಹೊಲಸು ರಾಜಕಾರಣ

ಪದವೀಧರರ ಚುನಾವಣೆ: ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ವಾಗ್ದಾಳಿ
Published 1 ಜೂನ್ 2024, 4:53 IST
Last Updated 1 ಜೂನ್ 2024, 4:53 IST
ಅಕ್ಷರ ಗಾತ್ರ

ರಾಮನಗರ: ‘ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ರಾವ್ ಅಲಿಯಾಸ್ ರಾಮೋಜಿ ಗೌಡ ಅವರು, ಮತದಾರರಿಗೆ ಕೊರಿಯರ್‌ ಮೂಲಕ ಗಿಫ್ಟ್‌ಗಳನ್ನು ವಿತರಿಸಿದ್ದಾರೆ. ಗಿಫ್ಟ್ ಹಂಚುವ ಮೂಲಕ ಹೊಲಸು ರಾಜಕೀಯ ಮಾಡುತ್ತಿರುವ ಇಂತಹವರು ಪದವೀಧರರ ಸೇವೆ ಮಾಡುತ್ತಾರೆಯೇ?’ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ವಾಗ್ದಾಳಿ ನಡೆಸಿದರು.

‘ಗಿಫ್ಟ್‌ ಹಂಚಿ ಮತದಾರರನ್ನು ಖರೀದಿಸಲು ಯತ್ನಿಸುವವರು, ತಾವು ಪ್ರತಿನಿಧಿಸುವವರ ಹಿತಾಸಕ್ತಿ ಬದಲು ಸ್ವಹಿತಾಸಕ್ತಿಯನ್ನಷ್ಟೇ ನೋಡಿಕೊಳ್ಳುತ್ತಾರೆ. ಇಂತಹವರು ಪದವೀಧರರ ಪ್ರತಿನಿಧಿಯಾಗಿ ಪರಿಷತ್ ಪ್ರವೇಶಿಸಲು ಲಾಯಕ್ಕಿಲ್ಲ. ಹಾಗಾಗಿ, ಅವರನ್ನು ಮನೆಗೆ ಗಳಿಸಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ. ದೇವೇಗೌಡ ಅವರನ್ನು ಮತದಾರರು ಬೆಂಬಲಿಸಬೇಕು’ ಎಂದು ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘1976ರಿಂದಲೂ ಪದವೀಧರರ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸುತ್ತಾ ಬಂದಿದೆ. ದೇವೇಗೌಡ ಅವರು ಎರಡು ಸಲ ಕ್ಷೇತ್ರವನ್ನು ಪ್ರತಿನಿಧಿಸಿ ಪದವೀಧರರ ದನಿಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಒಕ್ಕಲಿಗರ ಸಂಘದ ನಿರ್ದೇಶಕರಾಗಿದ್ದಾಗಿನಿಂದಲೂ ಅವರು ಉತ್ತಮ ಸೇವಾ ಕಾರ್ಯಗಳ ಮೂಲಕ ಮತದಾರರಿಗೆ ಸ್ಪಂದಿಸಿದ್ದಾರೆ’ ಎಂದರು.

‘ರಾಜ್ಯದಲ್ಲಿ ಎರಡು ಸಲ ಅಧಿಕಾರ ನಡೆಸಿರುವ ಬಿಜೆಪಿಯು ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲಾ ರೀತಿಯ ಪದವೀಧರರ ಪರವಾಗಿ ಕೆಲಸಗಳನ್ನು ಮಾಡಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆ, ಶಾಲಾ–ಕಾಲೇಜುಗಳು, ಪಾಲಿಟೆಕ್ನಿಕ್‌ಗಳ ಆರಂಭ, ಶಿಕ್ಷಕರ ನೇಮಕಾತಿ ಸೇರಿದಂತೆ ಅಧಿಕಾರದುದ್ದಕ್ಕೂ ಅವರ ಹಿತಾಸಕ್ತಿಯನ್ನು ಕಾಯ್ದುಕೊಂಡು ಬಂದಿದೆ. ಕೋವಿಡ್ ಸಂದರ್ಭದಲ್ಲಿ ಅತಂತ್ರರಾದ ಖಾಸಗಿ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಹಾಗಾಗಿಯೇ, ಕ್ಷೇತ್ರದಲ್ಲಿ ಬಿಜೆಪಿ ಪಾರಮ್ಯ ಮೆರೆಯುತ್ತಾ ಬಂದಿದೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಆನಂದ ಸ್ವಾಮಿ, ಮುಖಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಜೆಡಿಎಸ್‌ನ ಶಿವಲಿಂಗಯ್ಯ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು.

- ‘ಹಣ ವರ್ಗಾವಣೆಯ ತನಿಖೆಯಾಗಲಿ’

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣವು ಅಧೀಕ್ಷಕರ ಆತ್ಮಹತ್ಯೆಯಿಂದಾಗಿ ಬೆಳಕಿಗೆ ಬಂದಿದೆ. ಇದರಲ್ಲಿ ಸರ್ಕಾರದ ಸಚಿವರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಗಮದ ಹಣದ ಜೊತೆಗೆ ಸರ್ಕಾರದ ಖಜಾನೆಯಿಂದಲೂ ತೆಲಂಗಾಣಕ್ಕೆ ಹಣ ಹೋಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಹಗರಣದಲ್ಲಿ ಭಾಗಿಯಾಗಿರುವ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು. ಅದಕ್ಕಾಗಿ ಬಿಜೆಪಿಯು ಜೂನ್ 6ರವರೆಗೆ ಗಡುವು ನೀಡಿದೆ. ರಾಜೀನಾಮೆ ನೀಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಅಶ್ವತ್ಥ ನಾರಾಯಣಗೌಡ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT