ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಹು ಬಂಧನಕ್ಕೆ ಬಿಜೆಪಿ ಆಗ್ರಹ

ರಾಮನಗರದಲ್ಲಿ ಬಿಜೆಪಿ–ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ
Published 12 ಡಿಸೆಂಬರ್ 2023, 7:10 IST
Last Updated 12 ಡಿಸೆಂಬರ್ 2023, 7:10 IST
ಅಕ್ಷರ ಗಾತ್ರ

ರಾಮನಗರ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಅಕ್ರಮ ನಗದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಐಜೂರು ವೃತ್ತದಲ್ಲಿ ಮಧ್ಯಾಹ್ನ ಜಮಾಯಿಸಿದ ಕಾರ್ಯಕರ್ತರು, ಸಾಹು ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಾಹು ಅವರನ್ನು ಕೂಡಲೇ ಬಂಧಿಸಿ, ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

‘ಸಾಹು ಅವರಿಗೆ ಸೇರಿದ್ದೆನ್ನಲಾದ ಡಿಸ್ಟಿಲರಿ ಘಟಕದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು ₹300 ಕೋಟಿಗೂ ಹೆಚ್ಚು ನಗದು ಜಪ್ತಿ ಮಾಡಿದ್ದಾರೆ. ಇದು ಕಾಂಗ್ರೆಸ್‌ನಲ್ಲಿರುವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಬಡವರ ಹಣ ಲೂಟಿ ಮಾಡಿರುವ ಸಾಹು ಅವರಂತಹ ಭ್ರಷ್ಟರನ್ನು ಅಧಿಕಾರಿಗಳು ಕೂಡಲೇ ಬಂಧಿಸಬೇಕು’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜು ಆಗ್ರಹಿಸಿದರು.

‘ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಒತ್ತು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ದೇಶದಾದ್ಯಂತ ಭ್ರಷ್ಟರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಅಕ್ರಮವಾಗಿ ಹಣ ಮತ್ತು ಆಸ್ತಿ ಗಳಿಸಿದವರ ವಿರುದ್ಧ ಕಾನೂನು ಸಮರ ಸಾರಿವೆ’ ಎಂದರು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಾತನಾಡಿ, ‘ಸಾಹು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತರಾಗಿದ್ದಾರೆ. ಜೊತೆಗೆ, ಹಲವು ಪ್ರಮುಖರ ಜೊತೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ಸಾಹು ಅವರಿಗೆ ಸೇರಿದ ಅಕ್ರಮ ನಗದು ಪತ್ತೆಯಾಗಿರುವ ಸಿಕ್ಕಿರುವ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರಾದ ಆರ್.ವಿ. ಸುರೇಶ್, ನಾಗೇಶ್, ಗೋಪಾಲ್, ಚಂದನ್, ಯಶವಂತ್, ಲಕ್ಷ್ಮಿ, ಜಯಶೀಲಾ, ಚನ್ನಪ್ಪ, ಕನಕಪುರ ಮುರಳಿ, ಅನಿಲ್, ಅಶ್ವತ್ಥ ನಾರಾಯಣ, ಜೆಡಿಎಸ್ ಮುಖಂಡರಾದ ಜಯಕುಮಾರ್, ಶಿವರಾಜು ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT