ಮಂಗಳವಾರ, ಫೆಬ್ರವರಿ 18, 2020
31 °C
ಸರ್ಕಾರವನ್ನು ಎಚ್ಚರಿಸಲು ಕನ್ನಡಿಗರ ನೇತೃತ್ವದಲ್ಲಿ ಕರೆ

ಕರ್ನಾಟಕ ಬಂದ್‌ಗೆ ಸಹಕಾರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕನ್ನಡಿಗರ ಉದ್ಯೋಗಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಇದೇ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘ ಸಂಸ್ಥೆಗಳು ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ಸೇವಾದಳ ಸಂಸ್ಥಾಪಕ ಅಧ್ಯಕ್ಷೆ ಆಶಾ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆಸುತ್ತಿರುವ ಮುಷ್ಕರ ನೂರು ದಿನಗಳತ್ತ ದಾಪುಗಾಲು ಹಾಕುತ್ತಿದೆ. ಹೋರಾಟಕ್ಕೆ ಮಣಿಯದ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಕನ್ನಡಿಗರ ಸಾರಥ್ಯದಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ದಲಿತ ಸಂಘಟನೆಗಳ ಒಕ್ಕೂಟ, ಕಾರ್ಮಿಕ ಸಂಘಟನೆಗಳ ಒಕ್ಕೂಟ, ಕರ್ನಾಟಕ ಚಾಲಕರ ಸಂಘಟನೆಗಳ ಒಕ್ಕೂಟ, ಅಖಿಲ ಭಾರತ ಚಾಲಕರ ಒಕ್ಕೂಟ ಮಾತ್ರವಲ್ಲದೆ ರಾಜಕೀಯ ಮುಖಂಡರು, ಹಿರಿಯ ಯತಿಗಳು, ಮಠಾಧೀಶರು, ಸಾಹಿತಿಗಳು, ಚಲನಚಿತ್ರ ನಟ ನಟಿಯರು, ನಿರ್ಮಾಪಕರು, ನಿರ್ದೇಶಕರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಕನ್ನಡಿಗರ ಅಂದಿನ ಹೋರಾಟದ ಫಲವಾಗಿ ಸರೋಜಿನಿ ಮಹಿಷಿ ಸಮಿತಿ ಸದಸ್ಯರ ಪರಿಶ್ರಮದಿಂದಾಗಿ ಡಾ.ಸರೋಜಿನಿ ಮಹಿಷಿ ವರದಿ ತಯಾರಾಯಿತು. ಡಾ.ಸರೋಜಿನಿ ಮಹಿಷಿ ರವರು ಸ್ಥಳೀಯರಿಗೆ ಉದ್ಯೋಗ ಮಣ್ಣಿನ ಮಗ ಎಂಬ ನೀತಿಯನ್ನು ಪ್ರತಿಪಾದಿಸಿ ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ಯೋಗ ನೀಡಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ವಲಯದ ಉದ್ಯಮ, ಕಚೇರಿಗಳು, ಕೇಂದ್ರ ಸರ್ಕಾರಿ ವಲಯದ ಉದ್ಯಮ, ಬ್ಯಾಂಕ್ ಇತರ ಹಣಕಾಸು ಸಂಸ್ಥೆಗಳಲ್ಲಿ ಶೇ 100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಖಾಸಗಿ ಉದ್ಯಮದಲ್ಲಿ 3, 4, 5, 6 ಗುಂಪಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ‘ಎ’ ದರ್ಜೆ ಹುದ್ದೆಗಳಲ್ಲಿ ಮೀಸಲಾತಿ, ಡಿ ದರ್ಜೆ ಹುದ್ದೆಗಳಲ್ಲಿ ಶೇ 80ರಷ್ಟು ಮೀಸಲಾತಿ, ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ 100ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಉನ್ನತ ವೇತನ (ಎ ವರ್ಗ) ಹುದ್ದೆಗಳಿಗೆ, ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಶೇ 65ರಷ್ಟು ನೀಡಬೇಕು. ಬಿ ವರ್ಗದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವುದು. ಗ್ರಾಮಾಂತರ ಪ್ರದೇಶಕ್ಕೆ ಶೇ 80 ಹಾಗೂ ನಗರ ಪ್ರದೇಶಕ್ಕೆ ಶೇ 20ರಷ್ಟು ಕನ್ನಡಿಗರಿಗೆ ಉದ್ಯೋಗ ದಕ್ಕಬೇಕು ಎಂದು ತಿಳಿಸಿದರು.

ಮುಖಂಡರಾದ ರಣಧೀರ ಪಡೆಯ ರಾಜ್ಯ ಘಟಕದ ಉಪಾಧ್ಯಕ್ಷ ಗೋವಿಂದರಾಜು, ವಿಶ್ವನಾಥ್, ಗಾಯಿತ್ರಿಬಾಯಿ, ಗುರುಪ್ರಕಾಶ್, ಪ್ರಭು, ಎಂ. ಲೋಕೇಶ್, ಬೆಟ್ಟಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)