ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಚುನಾವಣೆ: ಚುನಾವಣೆಗೆ ಬಿಗಿ ಬಂದೋಬಸ್ತ್‌

Last Updated 27 ಏಪ್ರಿಲ್ 2021, 3:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕೊರೊನಾ ಆತಂಕದ ನಡುವೆಯೂ ನಗರಸಭೆಗೆ ಏ. 27ರಂದು ಚುನಾವಣೆ ನಡೆಯಲಿದ್ದು, 31 ವಾರ್ಡ್‌ಗಳಲ್ಲಿ 112 ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.

ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಸೂಕ್ತ ಕಟ್ಟೆಚ್ಚರ ವಹಿಸಲು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದೆ. ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು. ಹಾಗೆಯೇ ಕೊರೊನಾ ಹೆಚ್ಚುತ್ತಿರುವ ಕಾರಣ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ ಮತಗಟ್ಟೆಗಳಿಗೆ ಬರಬೇಕು. ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಬಗ್ಗೆ ಇರುವ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಕೋವಿಡ್ ದೃಢಪಟ್ಟಿರುವ ಮಂದಿಗೆ ಮತದಾನದ ಕೊನೆಯ ಒಂದು ಗಂಟೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮತದಾನಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಸೋಮವಾರ ಮತಯಂತ್ರದ ಜೊತೆ ತಾವು ನಿಯೋಜನೆಗೊಂಡಿರುವ ವಾರ್ಡ್‌ಗಳತ್ತ ತೆರಳಿದರು. ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ನಿಯೋಜಿತ ಸಿಬ್ಬಂದಿಗೆ ಮತಯಂತ್ರ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸಿ ಸೂಚನೆ ನೀಡಿದರು. ಇವುಗಳನ್ನು ಪಡೆದ ಸಿಬ್ಬಂದಿ ತಮಗೆ ನಿಗದಿಪಡಿಸಿದ ಮತಕೇಂದ್ರಗಳತ್ತ ಪ್ರಯಾಣ ಬೆಳೆಸಿದರು.

ಚುನಾವಣೆ ಮುಗಿದ ಬಳಿಕ ಮತಯಂತ್ರಗಳನ್ನು ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೂಕ್ತ ಬಂದೋಬಸ್ತ್ ನಲ್ಲಿ ಇಡಲಾಗುವುದು ಎಂದು ತಹಶೀಲ್ದಾರ್ ನಾಗೇಶ್ ತಿಳಿಸಿದ್ದಾರೆ.

ಆಮಿಷ: ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಅಂತಿಮ ಹಂತದ ಕಸರತ್ತು ಆರಂಭಿಸಿದ್ದು, ಮತದಾರರಿಗೆ ಹಲವಾರು ಆಮಿಷ ಒಡ್ಡುತ್ತಿರುವುದು ನಡೆಯುತ್ತಿದೆ.

ಹಾಗೆಯೇ ಕುಕ್ಕರ್, ಮಿಕ್ಸಿ, ಕೋಳಿ, ಮದ್ಯ, ಆಹಾರ ಧಾನ್ಯಗಳ ಚೀಲಗಳನ್ನು ಹಂಚುತ್ತಿರುವ ವರದಿಗಳು ಸಹ ಬರುತ್ತಿವೆ. ಅಭ್ಯರ್ಥಿಗಳ ಜೊತೆ ಇರುವ ಅನುಯಾಯಿಗಳು ಹಾಗೂ ಜೊತೆಗಾರರಿಗೆ ಬಾಡೂಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಅಂತಿಮ ಹಂತದ ಪ್ರಚಾರ: ಮತದಾನಕ್ಕೆ ಕೆಲವೇ ಗಂಟೆಗಳು ಉಳಿದಿರುವಂತೆ ಕೊರೊನಾ ಕಾಟದ ನಡುವೆಯೂ ಅಭ್ಯರ್ಥಿಗಳು ಮತದಾರರ ಮನ ಸೆಳೆಯಲು ಸೋಮವಾರ ಅಂತಿಮ ಹಂತದ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಅಂತಿಮ ಹಂತದ ಪ್ರಯತ್ನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT