ಬುಧವಾರ, ಆಗಸ್ಟ್ 4, 2021
22 °C
ಚನ್ನಪಟ್ಟಣ ನಗರದಲ್ಲಿ ಓಡಾಡಿದ್ದ ಚಿರತೆ; ಮೂರು ಗಂಟೆಗಳ ಕಾರ್ಯಾಚರಣೆ

ಚನ್ನಪಟ್ಟಣದಲ್ಲಿ ಚಿರತೆ ಸೆರೆ; ನಾಗರಿಕರಿಗೆ ಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಕಳೆದ ಮೂರು ದಿನಗಳ ಹಿಂದೆ ಪಟ್ಟಣದಲ್ಲಿ ಕಾಣಿಸಿಕೊಂಡು ನಾಗರಿಕರನ್ನು ಭಯಭೀತರನ್ನಾಗಿಸಿದ್ದ ಚಿರತೆಯನ್ನು ಶುಕ್ರವಾರ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಪಟ್ಟಣದ ಸಾಹುಕಾರ ಬೀದಿಯ ಸೇಂಟ್ ಮೈಕೇಲ್ ಶಾಲೆಯ ಪಕ್ಕದಲ್ಲಿ ಅವಿತು ಕುಳಿತಿದ್ದ 5 ವರ್ಷದ ಹೆಣ್ಣು ಚಿರತೆಯನ್ನು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅರಿವಳಿಕೆ ಚುಚ್ಚುಮದ್ದು ನೀಡಿ, ನಂತರ ಬಲೆಯನ್ನು ಬಳಸಿ ಸೆರೆ ಹಿಡಿಯಲಾಯಿತು.

ಜುಲೈ 13ರಂದು ಮುಂಜಾನೆ 2 ಗಂಟೆಯ ವೇಳೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ನಾಯಿಗಳನ್ನು ಓಡಿಸಿಕೊಂಡು ಬಂದಿದ್ದ ಈ ಚಿರತೆಯ ದೃಶ್ಯ ಅಲ್ಲಿಯ ಮನೆಯೊಂದರ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ವೈರಲ್ ಆಗಿ ನಾಗರಿಕರು ಆತಂಕಕ್ಕೀಡಾಗಿದ್ದರು. ಅರಣ್ಯ ಇಲಾಖೆಗೆ ಈ ಬಗ್ಗೆ ನಾಗರಿಕರು ದೂರು ಸಲ್ಲಿಸಿದ್ದರು. ಅಲ್ಲಲ್ಲಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕಾಣದಾದಾಗ ಅದು ಅರಣ್ಯಕ್ಕೆ ಹೋಗಿದೆ ಎಂದು ಹೇಳಿಕೆ ನೀಡಿ ಸುಮ್ಮನಾಗಿದ್ದರು.

ಶುಕ್ರವಾರ ಮುಂಜಾನೆ 6 ಗಂಟೆಯ ವೇಳೆಯಲ್ಲಿ ಪಟ್ಟಣದ ಎಂ.ಜಿ. ರಸ್ತೆ ಬಳಿಯ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗ ಚಿರತೆಯು ನಾಯಿ ಹಿಡಿಯುತ್ತಿರುವುದನ್ನು ನೋಡಿದ ಅನೇಕ ಮಂದಿ ಗಾಬರಿಗೊಂಡು, ಈ ಬಗ್ಗೆ ಅರಣ್ಯ ಇಲಾಖೆಗೆ
ಸುದ್ದಿ ಮುಟ್ಟಿಸಿದರು. ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ಪೊಲೀಸರ ಜೊತೆಗೂಡಿ ಕಾರ್ಯಾಚರಣೆಗೆ ಮುಂದಾದರು. ಇವರ ಜೊತೆಗೆ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಇಬ್ಬರು ಅರಿವಳಿಕೆ ಮದ್ದು ನೀಡುವ ತಜ್ಞ ವೈದ್ಯರು ಮತ್ತು ಶೂಟರ್‌ಗಳು ಬಂದಿದ್ದರು.

ನೀಲಕಂಠೇಶ್ವರ ದೇವಸ್ಥಾನ ಹಾಗೂ ಸೇಂಟ್ ಮೈಕೆಲ್ ಶಾಲೆಯ ಹಿಂಭಾಗದಲ್ಲಿದ್ದ ಪೊದೆಗಳಲ್ಲಿ ಚಿರತೆ ಅಡಗಿರುವ ಬಗ್ಗೆ ಶಂಕೆಗೊಂಡ ಸಿಬ್ಬಂದಿ, ಜೆಸಿಬಿ ಮೂಲಕ ಅಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಿದರು. ವೈದ್ಯರು, ಶೂಟರ್‌ಗಳು ಗನ್ ಹಿಡಿದು ನಿಂತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಲೆ ಬೀಸಿದ್ದು, ಮಧ್ಯೆ ಮಧ್ಯೆ ಪಟಾಕಿ ಸಿಡಿಸಲಾರಂಭಿಸಿದರು.

ಸುಮಾರು ಎರಡು ಗಂಟೆಗಳ ತರುವಾಯ ಚಿರತೆಯು ಪೊದೆಯಿಂದ ಹೊರಗೆ ಬಂದು ಓಡಿಹೋಗಿ, ಶಾಲೆಯ ಹಿಂಭಾಗದ ಪೊದೆಯೊಳಗೆ ಅವಿತುಕೊಂಡಿತು. ಮತ್ತೆ ಅರ್ಧಗಂಟೆಯ ನಂತರ ಹೊರಗೆ ಬಂದ ಚಿರತೆಗೆ ವೈದ್ಯರು, ಶೂಟ್ ಮಾಡುವ ಮೂಲಕ ಅರಿವಳಿಕೆ ಚುಚ್ಚುಮದ್ದು ನೀಡಿದರು. ತದನಂತರ ಬಲೆಗೆ ಬಿದ್ದರೂ ತಪ್ಪಿಸಿಕೊಂಡು ಓಡಿದ ಚಿರತೆ, ಮೊದಲು ಇದ್ದ ಪೊದೆಯ ಒಳಗೆ ಅವಿತುಕೊಂಡಿತು.

ಈ ಮೊದಲೇ ಅರಿವಳಿಕೆ ಚುಚ್ಚುಮದ್ದು ನೀಡಿದ್ದರಿಂದ ಪೊದೆಯಲ್ಲಿ ಚಿರತೆ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿತ್ತು. ನಂತರ ಸಿಬ್ಬಂದಿ ಅರ್ಧಗಂಟೆಯ ನಂತರ ಬಲೆ ಹಾಸುವ ಮೂಲಕ ಚಿರತೆಯನ್ನು ಸೆರೆ ಹಿಡಿದು, ಬೋನಿನೊಳಗೆ ಹಾಕಿದರು. ಜಿಲ್ಲಾ ಅರಣ್ಯಾಧಿಕಾರಿ ದೇವರಾಜು, ಈ ಚಿರತೆಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿ, ನಂತರ ಹಿರಿಯ ಅಧಿಕಾರಿಗಳ ಆದೇಶದಂತೆ ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದರು.

ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ಸುದ್ದಿ ಹಬ್ಬುತ್ತಿದ್ದಂತೆ ಸುತ್ತಮುತ್ತಲ ನಾಗರಿಕರು ಸ್ಥಳದಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಮನೆಗಳ ಮೇಲೆ ನಿಂತು ಸೆರೆ ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡರು. ಹಲವಾರು ಮಂದಿ ತಮ್ಮ ಮೊಬೈಲ್‌ಗಳಲ್ಲಿ ಸೆರೆ ದೃಶ್ಯ ಸೆರೆ ಹಿಡಿದರು. ಚಿರತೆ ಸೆರೆಯಾದ ನಂತರ ಈ ಭಾಗದ ನಾಗರಿಕರು ನಿಟ್ಟುಸಿರು ಬಿಟ್ಟರು.

ಬನ್ನೇರುಘಟ್ಟ ಪ್ರಾಣಿ ವೈದ್ಯಾಧಿಕಾರಿ ಉಮಾಶಂಕರ್, ವಲಯ ಅರಣ್ಯಾಧಿಕಾರಿ ದಿನೇಶ್, ಪಶುವೈದ್ಯ ರಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಪ್ರಕಾಶ್, ಮಮತಾ, ಜೋಸೆಫ್‌, ನಂಜುಂಡಸ್ವಾಮಿ, ಪೌರಾಯುಕ್ತ ಶಿವನಂಕಾರಿಗೌಡ, ನಗರಸಭೆ, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು