ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ರಾಣಗೊಂಡಿದ್ದ ವೃದ್ಧನ ಆರೈಕೆ

ಮೂರು ತಿಂಗಳ ಹಿಂದೆ ಬಸ್‌ ತಂಗುದಾಣದಲ್ಲಿ ಬಿಟ್ಟುಹೋದ ಮಕ್ಕಳು
Last Updated 1 ಜೂನ್ 2021, 3:37 IST
ಅಕ್ಷರ ಗಾತ್ರ

ಮಾಗಡಿ: ಲಾಕ್‌ಡೌನ್‌ನಿಂದ ಅನ್ನ ಸಿಕ್ಕದೆ ಗುಡೇಮಾರನಹಳ್ಳಿ ರಸ್ತೆ ಬೆಟ್ಟದಾಸಿ ಪಾಳ್ಯದ ಗೇಟ್ ಬಳಿ ತಂಗುದಾಣದಲ್ಲಿ ಹಸಿವಿನಿಂದ ನಿತ್ರಾಣಗೊಂಡಿದ್ದ ವೃದ್ಧರೊಬ್ಬರಿಗೆ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮಗೋಪಾಲ್ ಸೋಮವಾರ ನೆರವಾಗಿದ್ದಾರೆ.

ಆಹಾರ, ಹೊಸ ಬಟ್ಟೆಯೊಂದಿಗೆ ಸ್ಥಳಕ್ಕೆ ತೆರಳಿದ ಜಯಮ್ಮಗೋಪಾಲ್ ಮತ್ತು ಅವರ ಮಗ ಸುರೇಶ್, ನಿತ್ರಾಣಗೊಂಡಿದ್ದ ವೃದ್ಧರಿಗೆ ತಿಂಡಿ ತಿನ್ನಿಸಿದರು. ಕ್ಷೌರಿಕರೊಬ್ಬರನ್ನು ಕರೆಸಿಕೊಂಡು ಕ್ಷೌರ ಮಾಡಿಸಿ, ಬಿಸಿನೀರು ತರಿಸಿ ಸ್ನಾನ ಮಾಡಿಸಿದರು. ಹೊಸಬಟ್ಟೆ ತೊಡಿಸಿದರು. ಮಧ್ಯಾಹ್ನದ ತನಕ ವೃದ್ಧರೊಂದಿಗೆ ಇದ್ದು, ಯೋಗಕ್ಷೇಮ ವಿಚಾರಿಸಿ, ನಿತ್ಯ ತಿಂಡಿ ಊಟ ನೀಡುವುದಾಗಿ ತಿಳಿಸಿದರು.

‘ದೀನರ ಸೇವೆ ದೇವರ ಸೇವೆ ಎಂದು ನಂಬಿರುವ ನಾವು ಒಂದು ದಿನ ಅನ್ನವಿಲ್ಲದೆ ಸಂಕಟಪಡಬಹುದು. ಕಷ್ಟದಲ್ಲಿ ಇರುವವರಿಗೆ ನೆರವಾದರೆ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಅಳಿಲ ಸೇವೆ ನಮ್ಮದು. ಲಾಕ್‌ ಡೌನ್‌ ಸಮಯದಲ್ಲಿ ಅದೆಷ್ಟೋ ಹೊಟ್ಟೆಗಳು ಗಂಜಿಗೆ ಗತಿಯಿಲ್ಲದೆ ನರಳುತ್ತಿವೆ. ಸಿರಿವಂತರು ಬಡವರ ನೆರವಿಗೆ ಬರಬೇಕು’ ಎಂದರು.

‘ಇಬ್ಬರು ಪುತ್ರರಿದ್ದು, ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದಾರೆ. ನನ್ನನ್ನು ಕರೆದುತಂದು ಬಸ್ ತಂಗುದಾಣದಲ್ಲಿ ಬಿಟ್ಟು ಹೋದವರು ಹಿಂತಿರುಗಿ ನೋಡಿಲ್ಲ’ ಎಂದು ಕಂಬನಿ ಮಿಡಿದ ವೃದ್ಧ ಹೆಸರು ಹೇಳಲಿಲ್ಲ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್ ತೊಡಿಸಿ, ಹೆಚ್ಚುವರಿಯಾಗಿ ಮಾಸ್ಕ್‌ಗಳನ್ನು ನೀಡಿದ್ದಾರೆ. ಇವರೊಂದಿಗೆ ಮಂಜಣ್ಣ ಅವರು ವೃದ್ಧರಿಗೆ ಸ್ನಾನ ಮಾಡಿಸಲು ನೆರವಾಗಿದ್ದಾರೆ.

ಮೂರು ತಿಂಗಳಿಂದಲೂ ಶಿಥಿಲವಾಗಿರುವ ತಂಗುದಾಣದಲ್ಲಿ ಮಕ್ಕಳ ಬರುವಿಕೆಗಾಗಿ ಹಿರಿಯ ಜೀವ ದಾರಿ ಕಾಯುತ್ತಿದೆ. ಜಯಮ್ಮ ಗೋಪಾಲ್ ಅವರ ಮಾನವೀಯ ಸೇವೆಯನ್ನು ಗ್ರಾಮಸ್ಥರು ಮೆಚ್ಚಿದ್ದು, ’ನಮ್ಮ ಗ್ರಾಮಸ್ಥರಿಗೆ ಮಾಹಿತಿ ಇರಲಿಲ್ಲ. ಹಸಿದ ಹೊಟ್ಟೆಗೆ ಅನ್ನನೀಡುವುದು ಮಾನವಧರ್ಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT