ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ನಾಳೆಯಿಂದ ಐಯ್ಯನಗುಡಿ ದನಗಳ ಜಾತ್ರೆ

ಎಚ್.ಎಂ. ರಮೇಶ್
Published 11 ಜನವರಿ 2024, 6:19 IST
Last Updated 11 ಜನವರಿ 2024, 6:19 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಹಾಗೂ  ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮವು ಜ. 12ರಿಂದ ಹನ್ನೊಂದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಗ್ರಾಮೀಣ ಭಾಗದ ಜನರ ಬಾಯಲ್ಲಿ ಐಯ್ಯನಗುಡಿ ದನಗಳ ಜಾತ್ರೆ ಎಂದೇ ಪ್ರಚಲಿತವಾಗಿರುವ ಈ ಜಾತ್ರೆಯು, ಕಳೆದ ಮೂರು ನಾಲ್ಕು ವರ್ಷಗಳಿಂದ ಕೊರೊನಾ ಕಾರಣದಿಂದ ಕಳೆಗುಂದಿತ್ತು. ಈ ಬಾರಿ ದನಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ತಾಲ್ಲೂಕು ಆಡಳಿತ ಹಾಗೂ ದೇವಸ್ಥಾನ ಸಮಿತಿಯು ನಿರ್ಧರಿಸಿದೆ.

ತಾಲ್ಲೂಕಿನ ಅತಿದೊಡ್ಡ ಜಾತ್ರೆಯಾಗಿರುವ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆಯಲ್ಲಿ ದನಗಳ ಮಾರಾಟ ನಡೆಯುವುದು ವಿಶೇಷ. ಚನ್ನಪಟ್ಟಣ, ರಾಮನಗರ, ಕನಕಪುರ, ಮದ್ದೂರು, ಕುಣಿಗಲ್, ತುಮಕೂರು, ಮಾಗಡಿ ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ನೂರಾರು ದನಗಳು ಈ ಜಾತ್ರೆಗೆ ಆಗಮಿಸಲಿದ್ದು, ಎತ್ತು-ಹಸುಗಳನ್ನು ಕೊಳ್ಳುವ ಭರಾಟೆಯೂ ಜೋರಾಗಿ ನಡೆಯಲಿದೆ.

ರದ ಊರುಗಳಿಂದ ಗಿರಾಕಿಗಳು ಆಗಮಿಸಿ, ತಮಗೆ ಬೇಕಾದ ಜೋಡಿ ಎತ್ತುಗಳು, ಹಸುಗಳನ್ನು ಕೊಂಡುಕೊಳ್ಳ್ಳುತ್ತಾರೆ. ಈ ಬಾರಿಯ ದನಗಳ ಜಾತ್ರೆ ಕಳೆಕಟ್ಟುವ ನಿರೀಕ್ಷೆ ಹೆಚ್ಚಾಗಿದೆ.

ದನಗಳ ಜಾತ್ರೆಯಲ್ಲಿ ಸೇರುವ ಜಾನುವಾರುಗಳಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡುವುದು ಇಲ್ಲಿಯ ವಿಶೇಷ. ಅತ್ಯುತ್ತಮ ಜೋಡಿ ಎತ್ತುಗಳಿಗೆ ಚಿನ್ನದ ಪದಕ ಹಾಗೂ ಪಾರಿತೋಷಕ, ಉತ್ತಮ ಹಸುಗಳಿಗೆ ಬೆಳ್ಳಿ ಪದಕ ಬಹುಮಾನ ನೀಡಲಾಗುತ್ತದೆ.

 ಅರಿವು ಮೂಡಿಸಲು ಸೂಚನೆ: ಜಾತ್ರಾ ಮಹೋತ್ಸವದಲ್ಲಿ ಜಾನುವಾರುಗಳ ಜೊತೆ ಅತಿಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವುದರಿಂದ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಮಳಿಗೆಗಳನ್ನು ತೆರೆಯುವಂತೆ ಈಗಾಗಲೇ ಜಿಲ್ಲಾಧಿಕಾರಿ ಆಯಾಯ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಇಲಾಖೆ ವತಿಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು. ರಾಸುಗಳಿಗೆ ಚಿಕಿತ್ಸೆ ನೀಡಲು ಪಶುಪಾಲನಾ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಬೇಕು ಎಂದು ಸೂಚಿಸಿದ್ದಾರೆ.

ವಿಶೇಷ: ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ದೇವಾಲಯ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಸರ್ವಧರ್ಮ ಸಹಿಷ್ಣುತೆಯುಳ್ಳ ಈ ದೇವಾಲಯವನ್ನು 12 ಬಾರಿ ಪ್ರದಕ್ಷಿಣೆ ಹಾಕಿದರೆ ತಮ್ಮ ಮನಸ್ಸಿನ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಈ ಭಾಗದ ಜನತೆಯಲ್ಲಿದೆ. ವ್ಯಾಸರಾಯರಿಂದ ಪ್ರತಿಷ್ಠಾಪಿತರಾಗಿರುವ ಕೆಂಪು ಕಲ್ಲಿನ ಕೆಂಗಲ್‌ ಆಂಜನೇಯ ಮೂರ್ತಿ ನೋಡುಗರನ್ನು ಆಕರ್ಷಿಸುತ್ತದೆ.

ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ (ಸಂಗ್ರಹ ಚಿತ್ರ)
ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ (ಸಂಗ್ರಹ ಚಿತ್ರ)

ಜಾತ್ರಾ ಮಹೋತ್ಸವ ಪೂಜಾ ಕಾರ್ಯಕ್ರಮಗಳು

ಜ.12ರಂದು ವಿವಿಧ ಪೂಜೆ13ರಂದು ಹಂಸವಾಹನೋತ್ಸವ 14ರಂದು ಶೇಷ ವಾಹನೋತ್ಸವ ಪ್ರಾಕಾರೋತ್ಸವ 15ರಂದು ಚಂದ್ರಮಂಡಲ ವಾಹನೋತ್ಸವ 16ರಂದು ಹನುಮಂತೋತ್ಸವ 17ರಂದು ಗರುಡೋತ್ಸವ 18ರಂದು ಗಜವಾಹನೋತ್ಸವ ಕಲ್ಯಾಣೋತ್ಸವ ಉಯ್ಯಾಲೆ ಸೇವೆ ಸುದರ್ಶನ ಹೋಮ ಮೂರ್ತಿ ಹೋಮ ವಿಷ್ಣುಸಹಸ್ರನಾಮ ಹೋಮ ನಡೆಯಲಿದೆ. 19ರಂದು ಬೆಳಿಗ್ಗೆ 11.55ರಿಂದ 12.55ರವರೆಗೆ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಗೋವು ಮತ್ತು ಅಶ್ವಪೂಜೆ ಪೂಜಾಕುಣಿತ ತಮಟೆ ಸೇವೆ ಪ್ರಸಾದ ವಿನಿಯೋಗ ಮುತ್ತಿನ ಪಲ್ಲಕ್ಕಿ ಉತ್ಸವ ಹೂವಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ. 20ರಂದು ಸಮರಭೂಪಾಲ ವಾಹನೋತ್ಸವ ಜ.21ರಂದು ಕೆಂಗಲ್ ತಿರುಕಲ್ಯಾಣಿಯಲ್ಲಿ ವಸಂತೋತ್ಸವ ಅಶ್ವವಾಹನೋತ್ಸವ ಧ್ವಜಾರೋಹಣ ಪೂರ್ಣಾಹುತಿ ಜ.22ರಂದು ಅಷ್ಟೋತ್ತರ ಶತಕುಂಬಾಭಿಷೇಕ ಶಾಂತ್ಯೋತ್ಸವ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT