ಭಾನುವಾರ, ಸೆಪ್ಟೆಂಬರ್ 19, 2021
24 °C
ಅಪ್ಪಗೆರೆ ಗ್ರಾಮದಲ್ಲಿ ಅಕ್ರಮವಾಗಿ ಮಗು ಪಾಲನೆ ಪ್ರಕರಣ

ಚನ್ನಪಟ್ಟಣ: ಶಿಶು ಮಾರಾಟ ಜಾಲದ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಮಗು ಪಾಲನೆ ಮಾಡುತ್ತಿದ್ದ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಶಿಶು ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಪ್ಪಗೆರೆ ಗ್ರಾಮದಲ್ಲಿ ಜುಲೈ ತಿಂಗಳಿನಲ್ಲಿ ಮಹಿಳೆಯೊಬ್ಬರು ನವಜಾತ ಶಿಶುವೊಂದನ್ನು ನನ್ನ ಮಗು ಎಂದು ಹೇಳಿಕೊಂಡು ಪಾಲನೆ ಮಾಡುತ್ತಿದ್ದರು. ಮಗುವಿನ ಜನನ ವಿಚಾರ ದಾಖಲು ಮಾಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆ ಹೋಗಿದ್ದಾಗ ಮಗುವಿನ ಆಸ್ಪತ್ರೆಯ ದಾಖಲಾತಿಗಳು ಇಲ್ಲದ ವಿಚಾರ ಗೊತ್ತಾಗಿದೆ. ಅನುಮಾನಗೊಂಡ ಅಂಗನವಾಡಿ ಕಾರ್ಯಕರ್ತೆ ಸಿಡಿಪಿಒಗೆ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದ ಸಿಡಿಪಿಒ ಪರಿಶೀಲನೆ ನಡೆಸಿದ್ದರು.

ಮಹಿಳೆ ಅಧಿಕಾರಿಗಳ ಜೊತೆ ಇದು ನನ್ನ ಮಗುವಲ್ಲ. ನಾನು ಶಿಶುವನ್ನು ದತ್ತು ಪಡೆದಿರುವುದಾಗಿ ತಿಳಿಸಿದ್ದಳು. ಆಗ ಅಧಿಕಾರಿಗಳು ತನಿಖೆ ನಡೆಸಿದಾಗ ಆಕೆ ಕಾನೂನು ಪ್ರಕಾರ ದತ್ತು ಪಡೆದಿರುವ ದಾಖಲೆಗಳು ಆಕೆಯ ಬಳಿ
ಇರಲಿಲ್ಲ. ಅಧಿಕಾರಿಗಳು ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಆಗ ಪೊಲೀಸರು ದತ್ತು ಪಡೆದ ಮಹಿಳೆ ಹಾಗೂ ದತ್ತು ಕೊಟ್ಟ ಮಹಿಳೆಯನ್ನು ಬಂಧಿಸಿದ್ದರು.

ನರ್ಸ್‌ ಬಂಧನ: ಈ ಬಗ್ಗೆ ತನಿಖೆ ಮುಂದುವರಿಸಿದ್ದ ಪೊಲೀಸರಿಗೆ ಈ ಜಾಲದಲ್ಲಿ ಇನ್ನೂ ಹಲವು ಮಂದಿ ಇರುವ ಬಗ್ಗೆ ಮಾಹಿತಿ ದೊರೆತಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನರ್ಸ್‌ಗಳು ಮತ್ತು ಸಾರ್ವಜನಿಕ ಆಸ್ಪತ್ರೆಯ ಒಬ್ಬ ಸಹಾಯಕಿ ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ. ನರ್ಸ್ ಹಾಗೂ ಆಸ್ಪತ್ರೆಯ ಸಹಾಯಕಿ ಬಂಧನವಾಗಿರುವ ಕಾರಣ ಮಕ್ಕಳ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ತಾಲ್ಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದ ಮಹಿಳೆ ಮದ್ದೂರಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಈಕೆಯ ಪತಿ ಬೆಂಗಳೂರಿನ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ತನಗೆ ಮಕ್ಕಳಾಗುವುದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಎಲ್ಲಿ ಪತಿ ನನ್ನನ್ನು ದೂರ ಮಾಡುವರೊ ಎಂಬ ಭಯದಿಂದ ಈಕೆ ಪತಿಗೆ ತಾನು ಗರ್ಭಿಣಿ ಎಂದು ನಂಬಿಸಿ, ಮನೆಯಿಂದ ಹೊರಬಂದು ತವರುಮನೆಗೂ ಹೋಗದೆ ತಾಲ್ಲೂಕಿನ ಅಪ್ಪಗೆರೆಯಲ್ಲಿ ಒಬ್ಬರೇ ವಾಸವಾಗಿದ್ದರು. ‘ನಾನು ಗರ್ಭಿಣಿ’ ಎಂದು ಪತಿಗೆ ಹೇಳಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದೇನೆ ಎಂದು ಹೊಟ್ಟೆಗೆ ಬಟ್ಟೆ ಹಾಕಿಕೊಂಡು ಪತಿಯನ್ನು ನಂಬಿಸಿ 7 ತಿಂಗಳು ಕಳೆದ ನಂತರ ಸೀಮಂತವನ್ನು ಸಹ ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಬಾಣಂತಿ ನಾಟಕ: ‘ಒಂಬತ್ತು ತಿಂಗಳು ಕಳೆಯುತ್ತಿದ್ದಂತೆ ನವಜಾತು ಶಿಶುವನ್ನು ಹಣವನ್ನು ಕೊಟ್ಟು ಖರೀದಿಸಿ, ಮಗುವಿನ ಜನನವಾಯಿತು’ ಎಂದು ಹೇಳಿ ತಲೆಗೆ ಬಟ್ಟೆ ಕಟ್ಟಿಕೊಂಡು ತಾನು ಬಾಣಂತಿ ಎಂದು ಪತಿಯನ್ನು ನಂಬಿಸಿದ್ದಾಳೆ. ಶಿಶುವಿನ ಜನನವಾಗಿದೆ ಎಂದು ತಿಳಿದ ಅಂಗನವಾಡಿ ಕಾರ್ಯಕರ್ತೆ ಮಗುವಿನ ವಿವರಗಳನ್ನು ದಾಖಲೆ ಮಾಡಿಕೊಳ್ಳಲು ಆಕೆಯ ಮನೆಗೆ ತೆರಳಿ ಮಗುವಿನ ಕಾರ್ಡ್ ಕೊಡಲು ಕೇಳಿದಾಗ ಆ ಮಹಿಳೆ ತಡವರಿಸಿದ್ದಾಳೆ. ಮಗುವಿನ ಕಾರ್ಡ್ ಇಲ್ಲದ್ದನ್ನು ಮನಗಂಡ ಅಂಗನವಾಡಿ ಕಾರ್ಯಕರ್ತೆ ಅನುಮಾನಗೊಂಡು ಸಿಡಿಪಿಒಗೆ ತಿಳಿಸಿದ್ದಾರೆ. ಆಗ ಇಡೀ ಪ್ರಕರಣ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ಪಗೆರೆ ಮಹಿಳೆಯು ತನಗೆ ಪರಿಚಿತಳಾಗಿದ್ದ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಸಹಾಯಕಿಯೊಬ್ಬರ ಮೂಲಕ ಶಿಶುವನ್ನು ಖರೀದಿಸುವ ಕೃತ್ಯಕ್ಕೆ ಮುಂದಾಗಿದ್ದಳು. ಸಾರ್ವಜನಿಕ ಆಸ್ಪತ್ರೆಯ ಸಹಾಯಕಿಯು ಹಣ ಪಡೆದು ತನಗೆ ಪರಿಚಿತರಾಗಿದ್ದ ಬೆಂಗಳೂರಿನ ಇಬ್ಬರು ನರ್ಸ್‌ಗಳನ್ನು ಭೇಟಿಯಾಗಿ ಅವರ ಮೂಲಕ ಬೆಂಗಳೂರಿನ ಮಹಿಳೆಯೊಬ್ಬರಿಗೆ ಸೇರಿದ್ದ ನವಜಾತ ಶಿಶುವನ್ನು ಹಣಕೊಟ್ಟು ಖರೀದಿ ಮಾಡಿ ತಂದಿದ್ದಾರೆ. ಈ ಜಾಲದಲ್ಲಿ ಮಧ್ಯವರ್ತಿಯಾಗಿ ಬೆಂಗಳೂರಿನ ಮತ್ತೊಬ್ಬ ಮಹಿಳೆ ಸಹಕಾರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ನವಜಾತ ಶಿಶುವಿನ ಮಾರಾಟ ನಡೆದಿರುವ ಕಾರಣ ಶಿಶು ಮಾರಾಟ ದಂಧೆ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಬಲವಾದ ಅನುಮಾನವಿದೆ. ಬಂಧಿತ ಆರೋಪಿಗಳ ಪಟ್ಟಿಯಲ್ಲಿ ಇಬ್ಬರು ನರ್ಸ್‌ಗಳು ಮತ್ತು ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಒಬ್ಬ ಮಹಿಳೆಯ ಹೆಸರು ಇರುವ ಕಾರಣ ಅನುಮಾನ ಬಲಗೊಂಡಿದೆ. ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎನ್ನುವ ಬಡವರನ್ನು ಗುರಿಯಾಗಿಸಿಕೊಂಡು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡಿಸುವುದಾಗಿ ಹೇಳಿ ಹಣಕ್ಕೆ ಶಿಶುಗಳನ್ನು ಮಾರಾಟ ಮಾಡುತ್ತಿರುವ ವ್ಯವಸ್ಥಿತ ತಂಡವೊಂದು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು