ಚನ್ನಪಟ್ಟಣ: ಉಪಚುನಾವಣೆಯ ಕಾವು ಏರುತ್ತಿರುವಂತೆ ಮತ್ತೊಂದು ಜಿದ್ದಾಜಿದ್ದಿನ ಹೋರಾಟಕ್ಕೆ ಚನ್ನಪಟ್ಟಣವು ಸಾಕ್ಷಿಯಾಗಲಿದ್ದು, ಇಲ್ಲಿನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಗೂ ಮೊದಲೆ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ಸಂಘರ್ಷ ಏರ್ಪಟ್ಟಿದೆ.
ಒಟ್ಟು 31 ಸಂಖ್ಯಾಬಲದ ನಗರಸಭೆಯಲ್ಲಿ ಜೆಡಿಎಸ್ 16, ಕಾಂಗ್ರೆಸ್ 7, ಬಿಜೆಪಿ 7 ಸ್ಥಾನಗಳಲ್ಲಿ ಜಯ ಗಳಿಸಿದ್ದವು. ಒಂದು ಸ್ಥಾನ ಪಕ್ಷೇತರ ಪಾಲಾಗಿತ್ತು. ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್ ಮೊದಲ ಅವಧಿಯ ಅಧಿಕಾರವನ್ನು ನಿರಾಯಾಸವಾಗಿ ನಡೆಸಿತ್ತು. ಈಗ ಎರಡನೇ ಅವಧಿಗೆ ಅಧ್ಯಕ್ಷಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.
ಆದರೆ ಲೋಕಸಭಾ ಚುನಾವಣೆಗೂ ಮೊದಲು ಅಧ್ಯಕ್ಷರೂ ಸೇರಿದಂತೆ 9 ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ. ಈಗ ಜೆಡಿಎಸ್ ಸಂಖ್ಯಾಬಲವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿರುವ ಕಾರಣ ಅಧ್ಯಕ್ಷಗಾದಿಗೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಕಾಂಗ್ರೆಸ್ ಈಗ 16 ಸ್ಥಾನ, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕೂಟ ತಲ 7 ರಂತೆ 14 ಸದಸ್ಯಬಲ ಹೊಂದಿವೆ. ಮೈತ್ರಿಗೆ ಲೋಕಸಭಾ ಸದಸ್ಯ ಸಿ.ಎನ್. ಮಂಜುನಾಥ್ ಅವರ ಮತವೂ ಇರುವುದರಿಂದ 15 ಸಂಖ್ಯಾಬಲ ಆಗಲಿದೆ. ಪಕ್ಷೇತರ ಸದಸ್ಯರೊಬ್ಬರು ಯಾರಿಗೆ ಬೆಂಬಲ ನೀಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಚನ್ನಪಟ್ಟಣ ಉಪ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಗರಸಭಾ ಅಧಿಕಾರ ಗದ್ದುಗೆಯೂ ಸಹ ಅಷ್ಟೇ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಅವರು ನಗರಸಭೆಯನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುವುದಂತೂ ಖಚಿತ. ಇದಕ್ಕಾಗಿ ಎಲ್ಲ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ತಿಳಿಸುತ್ತಾರೆ.
ಈಗಾಗಲೇ ಚನ್ನಪಟ್ಟಣದಲ್ಲಿ ಉಪ ಚುನಾವಣಾ ರಣಕಹಳೆ ಊದಿರುವ ಡಿ.ಕೆ.ಶಿವಕುಮಾರ್ ಅವರು ನಾನೆ ಕಾಂಗ್ರೆಸ್ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಹಲವಾರು ಜನಸ್ಪಂದನಾ ಸಭೆಗಳು, ನಿವೇಶನ ಹಂಚಿಕೆ ಭರವಸೆ, ಉದ್ಯೋಗ ಮೇಳದ ಮೂಲಕ ಈಗಾಗಲೇ ಜನರ ಮನಸ್ಸು ಸೆಳೆಯಲು ಮುಂದಾಗಿರುವ ಅವರು ಉಪ ಚುನಾವಣೆಗೂ ಮುನ್ನಾ ನಗರಸಭೆ ಅಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ. ಇದನ್ನು ಗೆದ್ದರೆ ಉಪ ಚುನಾವಣೆ ಗೆಲ್ಲಲು ಸುಲಭವಾಗಬಹುದು ಎನ್ನುವುದು ಡಿಕೆಶಿ ಲೆಕ್ಕಾಚಾರವಾಗಿದೆ ಎಂದು ಅರ್ಥೈಸಲಾಗುತ್ತಿದೆ.
ಇನ್ನು ಮೈತ್ರಿ ಪಕ್ಷದಲ್ಲಿ ಉಪ ಚುನಾವಣೆ ಟಿಕೆಟ್ ಗೆ ಶೀತಲಸಮರ ಆರಂಭವಾಗಿದ್ದರೂ ನಗರಸಭೆ ವಿಚಾರದಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಇರಾದೆ ಹೊಂದಿವೆ. ಮೈತ್ರಿ ಪಕ್ಷದಲ್ಲಿ ಒಟ್ಟು 14 ಸದಸ್ಯ ಬಲ ಹಾಗೂ ಸಂಸದರ ಮತ ಇರುವ ಕಾರಣ ಒಟ್ಟು 15 ಮತಗಳಾಗಲಿವೆ. ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿರುವ ಸದಸ್ಯರಲ್ಲಿ ಇಬ್ಬರನ್ನು ಮತ್ತೆ ಮಾತೃ ಪಕ್ಷಕ್ಕೆ ಸೆಳೆದುಕೊಂಡು ಅಧಿಕಾರವನ್ನು ಉಳಿಸಿಕೊಳ್ಳುವ ಚಿಂತನೆ ನಡೆಸುತ್ತಿದೆ.
ಅದೇ ರೀತಿ ಕಾಂಗ್ರೆಸ್ ಸಹ ಮೈತ್ರಿ ಪಕ್ಷದ ಇಬ್ಬರು ಸದಸ್ಯರನ್ನು ಸೆಳೆದು ಬಲ ಹೆಚ್ಚಿಕೊಂಡು ಅಧಿಕಾರ ಪಡೆದುಕೊಳ್ಳುವ ಉತ್ಸಾಹದಲ್ಲಿದೆ. ಕೇಂದ್ರಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಗೆ ಸಹ ನಗರಸಭೆ ಅಧಿಕಾರ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ಮೈತ್ರಿ ಪಕ್ಷದ ಮುಖಂಡರು ತಿಳಿಸುತ್ತಾರೆ.
ಡಿ.ಕೆ.ಶಿವಕುಮಾರ್ ಕುತೂಹಲ ನಡೆ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಬಹಳ ಮುಖ್ಯವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಚಿಂತನೆಯಲ್ಲಿರುವ ಡಿ.ಕೆ. ಶಿವಕುಮಾರ್ ಇಲ್ಲಿನ ನಗರಸಭೆ ಅಧಿಕಾರದ ಮೇಲೆ ಕಣ್ಣಿಟ್ಟಿರುವುದು ಸುಳ್ಳಲ್ಲ.
ಅಧ್ಯಕ್ಷಸ್ಥಾನವನ್ನು ಜೆಡಿಎಸ್ ನಿಂದ ಬಂದಿರುವ ಪಕ್ಷಾಂತರಿಗಳಿಗೆ ನೀಡಿದರೂ ಸರಿಯೆ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕು ಎನ್ನುವ ಛಲಕ್ಕೆ ಬಿದ್ದಿದ್ದಾರೆ ಎಂದು ಹೆಸರೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸುತ್ತಾರೆ.
ಆದರೆ ಕಾಂಗ್ರೆಸ್ ಪಕ್ಷದ ಏಳಿಗೆಗೆ ಹಲವಾರು ವರ್ಷಗಳಿಂದ ದುಡಿದ ಮಂದಿಯೂ ಅಧ್ಯಕ್ಷಸ್ಥಾನದ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಇದರ ಬಗ್ಗೆ ಡಿ.ಕೆ.ಶಿ. ಯಾವ ತಂತ್ರ ರೂಪಿಸುತ್ತಾರೆ ಎನ್ನುವುದು ಕುತೂಹಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.