ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ನಿವೇಶನ ಹಂಚಿಕೆಗೆ ಶೀಘ್ರ ಚಾಲನೆ: ಡಿಸಿಎಂ

ನಿವೇಶನಕ್ಕೆ ಗುರುತಿಸಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿ.ಕೆ. ಶಿವಕುಮಾರ್
Published : 9 ಆಗಸ್ಟ್ 2024, 4:43 IST
Last Updated : 9 ಆಗಸ್ಟ್ 2024, 4:43 IST
ಫಾಲೋ ಮಾಡಿ
Comments

ಚನ್ನಪಟ್ಟಣ: ‘ತಾಲ್ಲೂಕಿನ ಬಡವರಿಗೆ ಮನೆ ಹಾಗೂ ನಿವೇಶನ ಹಂಚಿಕೆಗಾಗಿ, ಪಟ್ಟಣ ಹಾಗೂ ಗ್ರಾಮೀಣ ಭಾಗವನ್ನೊಳಗೊಂಡು ಒಟ್ಟು 120 ಎಕರೆ ಜಮೀನು ಗುರುತಿಸಲಾಗಿದೆ. ಕೊಟ್ಟ ಮಾತಿನಂತೆ ಆದಷ್ಟು ಬೇಗ ನಿವೇಶನ ಹಂಚಿಕೆಗೆ ಚಾಲನೆ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬಡವರಿಗೆ ನಿವೇಶನ ಹಂಚಿಕೆ ಸಲುವಾಗಿ ತಾಲ್ಲೂಕಿನ ಹುನುಮಂತನಗರ ಹಾಗೂ ಪಟ್ಲು ಗ್ರಾಮದಲ್ಲಿ ಗುರುತಿಸಿರುವ ಭೂಮಿಯನ್ನು ಶುಕ್ರವಾರ ಅಧಿಕಾರಿಗಳೊಂದಿಗೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವವನು. ಅದರಂತೆ, ನಿವೇಶನ ಹಂಚಲು ಜಮೀನು ಗುರುತಿಸುವ ಕೆಲಸ ನಡೆಯುತ್ತಿದೆ’ ಎಂದರು.

‘ತಾಲ್ಲೂಕಿನಲ್ಲಿ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಜನಸ್ಪಂದನ ಸರಣಿ ಕಾರ್ಯಕ್ರಮ ಮಾಡಿದ್ದಾಗ ಒಟ್ಟು 22 ಸಾವಿರ ಅಹವಾಲು ಸ್ವೀಕರಿಸಲಾಗಿತ್ತು. ಇದರಲ್ಲಿ ಸುಮಾರು 15 ಸಾವಿರ ಮಂದಿ ಮನೆ ಮತ್ತು ನಿವೇಶನ ಬೇಕು ಎಂದು ಅರ್ಜಿ ನೀಡಿದ್ದಾರೆ. ಅರ್ಜಿದಾರರ ಮನೆಗೆ ತೆರಳಿ ಸತ್ಯಾಸತ್ಯತೆ ಪರಿಶೀಲಿಸಿ, ನಿವೇಶನ ಹಂಚಿಕೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಹೇಳಿದರು.

‘ಜನತೆಗೆ ಆದಷ್ಟು ಬೇಗ ಅನುಕೂಲ ಮಾಡಿಕೊಡುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈಗ ಇರುವ ಸರ್ಕಾರಿ ಜಮೀನಿನ ಅಕ್ಕಪಕ್ಕ ಇರುವ ಖಾಸಗಿ ಜಮೀನು ನೀಡಲು ಮಾಲೀಕರು ಮುಂದೆ ಬಂದರೆ, ಸರ್ಕಾರದಿಂದ ಖರೀದಿಸಲಾಗುವುದು. ಮನೆ ಮತ್ತು ನಿವೇಶನ ಇಲ್ಲದವರು ಈಗಲೂ ಅರ್ಜಿ ನೀಡಬಹುದು’ ಎಂದು ತಿಳಿಸಿದರು.

‘ಕನಕಪುರದಲ್ಲಿ ನೂರಾರು ಎಕರೆ ಗುರುತಿಸಿ, ನಾನೇ ಖುದ್ದಾಗಿ ವಾರ್ಡ್ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡಿದ್ದೇನೆ. ಇಲ್ಲಿಯೂ ಇದೇ ರೀತಿ ಹಂಚಿಕೆ ಮಾಡಲಾಗುವುದು. ಉತ್ತಮ ದರ್ಜೆಯ ಲೇಔಟ್‌ಗಳನ್ನು ನಿರ್ಮಾಣ ಮಾಡಿ ಒಳಚರಂಡಿ, ಕುಡಿಯುವ ನೀರು, ಶಾಲೆ, ಅಂಗನವಾಡಿ, ದೇವಸ್ಥಾನ, ರಸ್ತೆ ಸೇರಿದಂತೆ ಎಲ್ಲಾ ಸೌಕರ್ಯ ನೀಡಲಾಗುವುದು. ಒಂದಿಷ್ಟು ಭೂಮಿ ಚನ್ನಪಟ್ಟಣಕ್ಕೆ ಹತ್ತಿರದಲ್ಲಿವೆ. ಇನ್ನೊಂದಷ್ಟು 5 ಕಿ.ಮೀ. ದೂರದಲ್ಲಿವೆ. ಖಾಸಗಿಯವರು ಜಮೀನು ನೀಡಿದರೆ ಮಾರುಕಟ್ಟೆ ದರದಲ್ಲಿಯೇ ಖರೀದಿ ಮಾಡಲಾಗುವುದು’ ಎಂದು ಹೇಳಿದರು.

‘ಉಪ ಚುನಾವಣೆ ಮುಂಚೆಯೇ ಹಂಚಿಕೆ ಮಾಡಲಾಗುವುದೇ’ ಎಂಬ ಪ್ರಶ್ನೆಗೆ, ‘ಈಗಾಗಲೇ ಸ್ಕೆಚ್ ಕೂಡ ಮಾಡಲಾಗಿದೆ. ಚನ್ನಪಟ್ಟಣ ನಗರ ಮಾತ್ರವಲ್ಲ. ಗ್ರಾಮೀಣ ಭಾಗದಲ್ಲೂ ನಿವೇಶನ ಹಂಚಿಕೆ ಮಾಡಲಾಗುವುದು. ಅವೇರಗಳ್ಳಿ, ಸುಳ್ಳೇರಿ, ಶಿಬನಹಳ್ಳಿ, ವಂದಾರಗುಪ್ಪೆ, ಅರಳಾಳುಸಂದ್ರ, ಬ್ರಹ್ಮಿಣೀಪುರ, ಪಟ್ಲು ಸೇರಿದಂತೆ ವಿವಿಧೆಡೆ ಜಮೀನು ಗುರುತಿಸಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್, ಕಾಂಗ್ರೆಸ್ ಮುಖಂಡರಾದ ರಾಜು, ದುಂತೂರು ವಿಶ್ವನಾಥ್, ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT