ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಸೈನಿಕರ ಹೆಸರಲ್ಲಿ ಯೋಗ ಶಿಕ್ಷಕ, ಗೃಹಿಣಿಗೆ ವಂಚನೆ

ಯೋಗ ತರಬೇತಿ, ಕಡಿಮೆ ಬೆಲೆಯಲ್ಲಿ ಗೃಹ ಬಳಕೆ ವಸ್ತುಗಳ ಮಾರಾಟದ ಆಸೆ ತೋರಿಸಿ ಮೋಸ
Published 23 ಮೇ 2024, 15:55 IST
Last Updated 23 ಮೇ 2024, 15:55 IST
ಅಕ್ಷರ ಗಾತ್ರ

ರಾಮನಗರ: ಯೋಧರಿಗೆ ಯೋಗ ತರಬೇತಿ ನೀಡುವ ನೆಪದಲ್ಲಿ ಮಾಗಡಿಯ ಬ್ರಹ್ಮಕುಮಾರಿ ಸೇವಾ ಸಂಸ್ಥೆಯ ಸಿಬ್ಬಂದಿ ಜಿ. ಗಂಗಾಧರ ಎಂಬುವರಿಗೆ ಆನ್‌ಲೈನ್ ವಂಚಕರು ₹99,952 ಮೊತ್ತ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 20ರಂದು ಗಂಗಾಧರ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಮಾಗಡಿಯ ಐಟಿಐ ಕಾಲೇಜು ಬಳಿ ಸೈನಿಕರು ಕ್ಯಾಂಪ್ ಹಾಕಿದ್ದು, ನಮಗೆ ಯೋಗ ಮತ್ತು ಧ್ಯಾನ ಹೇಳಿ ಕೊಡಬೇಕಿದೆ. ಅದಕ್ಕಾಗಿ, ನಿಮಗೆ ₹10 ಸಾವಿರ ಪಾವತಿಸುತ್ತಿದ್ದೇವೆ ಎಂದು ಹೇಳಿ, ಗಂಗಾಧರ್ ಅವರ ಫೋನ್‌ಪೇ ನಂಬರ್ ಪಡೆದುಕೊಂಡಿದ್ದಾರೆ.

ಮಾರನೇಯ ದಿನ ಕರೆ ಮಾಡಿದ್ದ ಅದೇ ವ್ಯಕ್ತಿ, ಕ್ಯಾಂಪ್ ಪ್ರವೇಶಿಸಿಲು ಆಧಾರ್ ಕಾರ್ಡ್ ಅಗತ್ಯವಿದೆ ಎಂದು ಹೇಳಿ ಅದರ ಪ್ರತಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ತರಿಸಿಕೊಂಡಿದ್ದಾನೆ. ನಂತರ, ಗಂಗಾಧರ್ ಅವರಿಗೆ ಕರೆ ಮಾಡಿ ಫೋನ್‌ ಪೇ ಆ್ಯಪ್ ಓಪನ್ ಮಾಡಿಸಿರುವ ವ್ಯಕ್ತಿ, ನಾನು ಹೇಳಿದಂತೆ ಮಾಡಿದರೆ ಯೋಗ ತರಬೇತಿಗೆ ಸಂಬಂಧಿಸಿ ಹಣ ನಿಮಗೆ ವರ್ಗಾವಣೆಯಾಗುತ್ತದೆ ಎಂದಿದ್ದಾರೆ.

ಆತನ ಮಾತನ್ನು ನಿಜವೆಂದು ನಂಬಿದ ಗಂಗಾಧರ್, ಅವರು ಕೊಟ್ಟ ಸೂಚನೆಗಳನ್ನು ಪಾಲಿಸಿದ್ದಾರೆ. ಆದರೆ, ಗಂಗಾಧರ್ ಅವರಿಗೆ ₹10 ಸಾವಿರ ಹಣ ಪಾವತಿಯಾಗುವ ಬದಲು, ಇವರ ಬ್ಯಾಂಕ್ ಖಾತೆಯಿಂದ ₹99,952 ಮೊತ್ತ ಕಡಿತವಾಗಿದೆ. ಈ ಕುರಿತು ವಿಚಾರಿಸಲು ಗಂಗಾಧರ್ ಅವರು ಆ ವ್ಯಕ್ತಿಗೆ ಕರೆ ಮಾಡಲು ಯತ್ನಿಸಿದಾಗ, ಆತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. ಆಗ ಗಂಗಾಧರ್ ಅವರಿಗೆ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ಮೋಸ

ಸಿಆರ್‌ಎಫ್ ಸೈನಿಕರಿಗೆ ಸೇರಿದ ಗೃಹ ಬಳಕೆಯ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ₹76,500 ವಂಚಿಸಿರುವ ಘಟನೆ ನಡೆದಿದೆ. ಬಿಡದಿಯ ಪ್ರಶಾಂತಿ ವಂಚನೆಗೊಳಗಾಗಿದ್ದು, ಈ ಕುರಿತು ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ಪ್ರಶಾಂತಿ ಅವರಿಗೆ ಪರಿಚಯವಿದ್ದ ಭಾಸ್ಕರ್ ರಾವ್ ಎಂಬುವರ ಫೇಸ್‌ಬುಕ್ ಖಾತೆಯಿಂದ ವಂಚಕರು, ‘ಸಿಆರ್‌ಪಿಎಫ್‌ ಸೇನೆಯಲ್ಲಿರುವ ಸ್ನೇಹಿತರು ಮನೆ ಖಾಲಿ ಮಾಡುತ್ತಿದ್ದ ಗೃಹ ಬಳಕೆಯ ವಸ್ತುಗಳನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದಾರೆ. ಬೇಕಿದ್ದರೆ ತೆಗೆದುಕೊ’ ಎಂದು ಸಂದೇಶ ಕಳಿಸಿದ್ದಾರೆ. ನಂತರ ಸಂತೋಷ್ ಕುಮಾರ್ ಎಂಬಾತ ಕರೆ ಮಾಡಿ ಮಾತನಾಡಿ, ವಸ್ತುಗಳ ಫೋಟೊ ಕಳಿಸಿದ್ದಾರೆ.

ಫೋಟೊ ನೋಡಿ ನಿಜವೆಂದು ನಂಬಿದ ಮಹಿಳೆ ₹1 ಲಕ್ಷಕ್ಕೆ ಖರೀದಿ ಮಾಡಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ವಂಚಕ ₹76,500 ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಉಳಿದ ಮೊತ್ತವನ್ನು ವಸ್ತುಗಳನ್ನು ಪೂರೈಕೆ ಮಾಡಿದ ನಂತರ ನೀಡುವುದಾಗಿ ಮಹಿಳೆ ಹೇಳಿದರೂ, ಬಾಕಿ ಮೊತ್ತಕ್ಕೆ ಆತ ಬೇಡಿಕೆ ಇಟ್ಟಾಗ ಆತನ ಮೇಲೆ ಸಂಶಯಗೊಂಡು ವಸ್ತುಗಳು ಮತ್ತು ವ್ಯಕ್ತಿಯ ಕುರಿತು ಪರಿಶೀಲಿಸಿದಾಗ, ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT