ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕುಂಬಾಪುರ ಸಮಗ್ರ ಅವೃದ್ಧಿಗೆ ಬದ್ಧ

ಜನಸಂಪರ್ಕ ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ, 122 ನಿವಾಸಿಗಳಿಗೆ ಇ–ಖಾತೆ ಪ್ರಮಾಣಪತ್ರ ವಿತರಣೆ
Published 22 ಸೆಪ್ಟೆಂಬರ್ 2023, 4:48 IST
Last Updated 22 ಸೆಪ್ಟೆಂಬರ್ 2023, 4:48 IST
ಅಕ್ಷರ ಗಾತ್ರ

ರಾಮನಗರ: ‘ಕುಂಬಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಈಗಾಗಲೇ ಗ್ರಾಮದಲ್ಲಿ ಸುಮಾರು ₹ 1.50 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆ. ಗ್ರಾಮಸ್ಥರು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವೆ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ತಾಲ್ಲೂಕಿನ ಕುಂಬಾಪುರ ಕಾಲೊನಿಯಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮವು ನನಗೆ ಹೆಚ್ಚು ಪ್ರೀತಿ–ವಿಶ್ವಾಸ ಹಾಗೂ ಗೌರವ ಕೊಟ್ಟಿದೆ. ಚುನಾವಣೆಯಲ್ಲಿ ನನ್ನ ಕೈ ಬಲಪಡಿಸಿದೆ. ನಾನು ಶಾಸಕನಾದ ಬಳಿಕ ಗ್ರಾಮಸ್ಥರ ಬೇಡಿಕೆಗಳ ಪೈಕಿ, ಪ್ರಮುಖವಾದ ಇ–ಖಾತಾ ಪ್ರಮಾಣಪತ್ರ ವಿತರಣೆಗೆ ಕ್ರಮ ಕೈಗೊಂಡಿದ್ದೇನೆ’ ಎಂದರು.

‘ಜನರು ಕೊಟ್ಟ ಅಧಿಕಾರದಿಂದ‌ ಇದು ಸಾಧ್ಯವಾಗಿದೆ. ಇದಕ್ಕೂ ಮುಂಚೆ ಕ್ಷೇತ್ರದಲ್ಲಿ 25 ವರ್ಷಅಧಿಕಾರದಲ್ಲಿದ್ದವರು ಹಾಗೂ ಎರಡು ಸಲ ಮುಖ್ಯಮಂತ್ರಿಯಾಗಿದ್ದವರು ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ ಪರಿಹಾರ ಸಿಗುತ್ತಿದೆ’ ಎಂದರು.

‘ಚಿಕ್ಕಮಣ್ಣಗುಡ್ಡೆ ಮತ್ತು ದೊಡ್ಡಮಣ್ಣಗುಡ್ಡೆಯ 2,800 ಎಕರೆ ಜಮೀನು ವ್ಯಾಜ್ಯವು ಸುಪ್ರೀಂ ಕೋರ್ಟ್‌ವರೆಗೆ ಹೋಗಿದೆ. ಈಗಾಗಲೇ ಜಮೀನಿನ ಸರ್ವೇ ಮಾಡಿಸಲಾಗಿದ್ದು, ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಈ ವಿಷಯದಲ್ಲಿ ಇನ್ನೆರಡು ತಿಂಗಳಲ್ಲಿ ನಿಮಗೆ ಸಿಹಿ‌ ಸುದ್ದಿ ಕೊಡುತ್ತೇವೆ’ ಎಂದರು.

ವಿವಿಧ ಬೇಡಿಕೆ ಸಲ್ಲಿಕೆ: ಊರಿಗೆ ಬರುವ ದಾರಿಯಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು, ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಬೇಕು, ಕಾಡಾನೆ ಹಾವಳಿ ತಡೆಯಬೇಕು, ಮನೆ ನಿರ್ಮಿಸಲು ನಿವೇಶನ ನೀಡಬೇಕು, ಕಂದಾಯ ಗ್ರಾಮವೆಂದು ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಹುಸೇನ್, ‘ಬೆಸ್ಕಾಂನವರು ಶೀಘ್ರ ಬೀದಿದೀಪ ಹಾಕಬೇಕು. ಬಸ್ ಸಂಪರ್ಕ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುವೆ. ಕಾಡಾನೆ ದಾಳಿ ತಡೆಗೆ ಪ್ರತ್ಯೇಕ ಪಡೆ ರಚಿಸಿದ್ದು, ಆನೆ ಬಂದಾಗ ಅರಣ್ಯ ಇಲಾಖೆ ಗಮನಕ್ಕೆ ತಂದರೆ, ಅವರು ಮರಳಿ ಕಾಡಿಗೆ ಕಳಿಸುತ್ತಾರೆ. ಉಳಿದ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

‘ಗ್ರಾಮಸ್ಥರು ಮನೆ ಕಟ್ಟಿಕೊಳ್ಳಲು ನಿವೇಶನ ಹಂಚುವುದಕ್ಕಾಗಿ ಸುತ್ತಮುತ್ತ ಗೋಮಾಳ ಜಾಗವಿದ್ದರೆ ಗುರುತಿಸಬೇಕು. ಸೂಕ್ತ ಜಾಗ ಸಿಕ್ಕರೆ, ಅಲ್ಲಿ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ಇಲ್ಲದವರಿಗೆ ಹಂಚಿಕೆ ಮಾಡೋಣ. ಅಲ್ಲದೆ, ಕ್ಷೇತ್ರದಲ್ಲಿ ಐದು ಸಾವಿರ ಮನೆ ನಿರ್ಮಾಣಕ್ಕೆ ವಸತಿ ಸಚಿವರು ಹಸಿರು ನಿಶಾನೆ ಕೊಟ್ಟಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಇಲ್ಲದವರ ಪಟ್ಟಿ ಮಾಡಿ. ಅವರಿಗೆ ಮನೆ ಕೊಡಲು ಮುಂದೆ ಕ್ರಮ ಕೈಗೊಳ್ಳೋಣ’ ಎಂದು ಪಿಡಿಒಗೆ ಸೂಚಿಸಿದರು.

ಶಾಲೆಗೆ ಭೇಟಿ: ಸಭೆಗೂ ಮುಂಚೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಹುಸೇನ್, ಶಿಥಿಲಗೊಂಡಿರುವ ಕೊಠಡಿ ಗಮನಿಸಿದರು. ‘ಅಪಾಯಕಾರಿಯಾಗಿರುವ ಕೊಠಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳಬೇಕಿದೆ. ಆದಷ್ಟು ಬೇಗ ಅದನ್ನು ಕೆಡವಿ ಹೊಸ ಕೊಠಡಿ ನಿರ್ಮಿಸಲು ಕ್ರಮ ಕೈಗೊಳ್ಳಿ’ ಎಂದು ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಅವರಿಗೆ ಸೂಚಿಸಿದರು.

ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಶಾಸಕರು, ನಂತರ ನಿವಾಸಿಗಳಿಗೆ ಇ-ಖಾತೆ ಪ್ರಮಾಣಪತ್ರಗಳನ್ನು ವಿತರಿಸಿದರು. ವಿಎಸ್‌ಎಸ್‌ಎನ್ ನಿರ್ದೇಶಕ ಪಾರ್ಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿರಣ್‌ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾಲ ಬೇಗ ಕಳೆದು‌ ಹೋಗುತ್ತದೆ. ಅಷ್ಟರೊಳಗೆ ಜನ ಕೊಟ್ಟಿರುವ ಈ ಅಧಿಕಾರವನ್ನು ಬಳಸಿ ನೆನಪಿನಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಬೇಕು
ಎಚ್.ಎ.‌ ಇಕ್ಬಾಲ್ ಹುಸೇನ್ ಶಾಸಕ

ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ಮಂಗಳಗೌರಮ್ಮ, ವಿಭೂತಿಕೆರೆ ಗ್ರಾಮ ಪಂಚಾಯಿತಿ ಪಿಡಿಒ ಗೋಮತಿ, ಸದಸ್ಯ ಸಿದ್ದರಾಜು, ತಾಲ್ಲೂಕು ಪಂಚಾಯಿತಿ ಇಒ ಪ್ರದೀಪ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಎಸ್. ಸೋಮಶೇಖರ್ ಮಣಿ, ಕಾಂಗ್ರೆಸ್ ಮುಖಂಡರಾದ ಕೆ. ರಾಜು, ಚೇತನ್ ಕುಮಾರ್, ವೀರಭದ್ರಸ್ವಾಮಿ, ತಿಪ್ಪೆಗೌಡ, ಜಯಲಕ್ಮ್ಮಮ್ಮ, ಪುಟ್ಟಸ್ವಾಮಿ, ನಾಗಮ್ಮ, ಕುಂಭಾಪುರ ಬಾಬು ಹಾಗೂ ಇತರರು ಇದ್ದರು.

‘ಸುತ್ತಾಡಿ ಸಮಸ್ಯೆ ಅರಿಯಬೇಕಿದೆ’

‘ಭಾನುವಾರವೂ ಬಿಡದೆ ಕ್ಷೇತ್ರದಲ್ಲಿ ನಾನು ಸುತ್ತಾಡುತ್ತಿರುವುದಕ್ಕೆ ಅಧಿಕಾರಿಗಳಿಗೆ ಬೇಸರವಾಗಿರಬಹುದು. ಕ್ಷೇತ್ರದ ಗ್ರಾಮಗಳ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಈ ಸುತ್ತಾಟ ಅನಿವಾರ್ಯ. ಚುನಾವಣೆಯಲ್ಲಿ ಗೆದ್ದು ಮೂರು ತಿಂಗಳಾದರೂ ಇನ್ನೂ ನಮ್ಮೂರಿಗೆ ಬಂದಿಲ್ಲ ಎಂದು ಹಲವರು ಮುನಿಸಿಕೊಂಡಿದ್ದಾರೆ. ಅಧಿಕಾರ ಇರುವವರೆಗೆ ಎಲ್ಲಾ ಕಡೆಯೂ ಸುತ್ತಾಡಿ ನಮ್ಮ ಕೈಲಾದ ಕೆಲಸಗಳನ್ನು ಮಾಡಬೇಕು’ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ‘ನಮ್ಮ ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರು ನೆಮ್ಮದಿಯಿಂದ ಬದುಕು ಸಾಗಿಸುವಂತೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ‌ ತಂದಿದ್ದೇವೆ. ಜನರಿಗೆ ಅಗತ್ಯ ಇರುವುದನ್ನು ನಾವು ಕೊಟ್ಟಿದ್ದೇವೆ. ಅವುಗಳನ್ನು ಜನರಿಗೆ ಸರಿಯಾಗಿ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT