ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ ಉದ್ಘಾಟನೆ: ಜ. 22ರಂದು ರಾಮನಗರದಲ್ಲಿ ವಿವಿಧ ಕಾರ್ಯಕ್ರಮ

Published 20 ಜನವರಿ 2024, 5:51 IST
Last Updated 20 ಜನವರಿ 2024, 5:51 IST
ಅಕ್ಷರ ಗಾತ್ರ

ರಾಮನಗರ: ‘ಅಯೋಧ್ಯೆಯಲ್ಲಿ ಜ. 22ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಅಂಗವಾಗಿ, ರಾಮನಗರದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಚರಣಾ ಸಮಿತಿ ಅಧ್ಯಕ್ಷ ಕೆ.ವಿ. ಉಮೇಶ್ ಹೇಳಿದರು.

‘ಮಂದಿರ ಉದ್ಘಾಟನೆ ಪ್ರಯುಕ್ತ ರಚನೆಯಾಗಿರುವ ಸಮಿತಿಯೊಂದಿಗೆ ಸುಮಾರು 48 ಸಂಘ-ಸಂಸ್ಥೆಗಳು ಕೈ ಜೋಡಿಸಿವೆ. ಅಂದು ಬೆಳಿಗ್ಗೆ 6.30ಕ್ಕೆ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ದೇವರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಲಿದೆ. 9 ಗಂಟೆಗೆ ಶ್ರೀರಾಮ ದೇವರ ಗರುಡ ವಾಹನದ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ’ ಎಂದು ನಗರದ ಕನ್ನಿಕಾ ಮಹಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಶ್ರೀರಾಮ ದೇವಾಲಯದಿಂದ ಹೊರಡುವ ಗರುಡ ವಾಹನವು ಎಂ.ಜಿ. ರಸ್ತೆಯಲ್ಲಿರುವ ಕನ್ನಿಕಾ ಮಹಲ್ ಬಳಿ ನಿರ್ಮಾಣವಾಗಲಿರುವ ವೇದಿಕೆಯಲ್ಲಿ ವಿರಾಜಮಾನವಾಗಲಿದೆ. ಅಯೋಧ್ಯೆಯಲ್ಲಿ 11.30ರಿಂದ ಆರಂಭವಾಗುವ ಪ್ರಾಣಪ್ರತಿಷ್ಠಾಪನಾ ಸಮಯದಲ್ಲೇ, ಇಲ್ಲಿಯೂ ಶ್ರೀರಾಮ ದೇವರ ಮೂರ್ತಿಗೆ ಶೋಡಷೋಪಚಾರ ಪೂಜೆ ನೆರೆವೇರಿಸಲಾಗುವುದು. ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಥಳೀಯರು ಕಣ್ತುಂಬಿಕೊಳ್ಳುವ ಸಲುವಾಗಿ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು’ ಎಂದರು.

‘ಮಂದಿರ ಉದ್ಘಾಟನೆ ಪ್ರಯುಕ್ತ ರಾಮನಗರದ ಪ್ರಮುಖ ಬೀದಿಗಳನ್ನು ತಳಿರು–ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಶ್ರೀರಾಮ ಮತ್ತು ಪರಿವಾರ ದೇವತೆಗಳ ಫ್ಲೆಕ್ಸ್‌ ಮತ್ತು ಕಟೌಟ್‍ಗಳನ್ನು ಅಳವಡಿಸಲಾಗುವುದು. ನಾಗರಿಕರು ಸಹ ಅಂದು ಸ್ವಯಂ ಪ್ರೇರಿತರಾಗಿ ಸಮಿತಿ ಮೂಲಕ ಅಲಂಕಾರ ಸೇವೆ ಹಮ್ಮಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕಾರ್ಯಕ್ರಮದಲ್ಲಿ ಕರ ಸೇವಕರಿಗೆ ಸನ್ಮಾನ, ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಶಾಲಾ– ವಿದ್ಯಾರ್ಥಿಗಳಿಂದ ರಾಮಾಯಣದ ವಿವಿಧ ಪಾತ್ರಗಳ ವೇಷಭೂಷಣ ಪ್ರದರ್ಶನ ಇರಲಿದೆ. ಮಧ್ಯಾಹ್ನ ಸುಮಾರು ಐದು ಸಾವಿರ ಜನರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ನಂತರ ಮೆರವಣಿಗೆ ಜರುಗಲಿದೆ. ಈ ವೇಳೆ ಪಟಾಕಿ ಸಿಡಿಸುವುದು ಹಾಗೂ ಬೈಕ್ ರ‍್ಯಾಲಿ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ, ಕಾರ್ಯಕ್ರಮ ಮುಗಿದ ಬಳಿಕ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಸಮಿತಿ ವತಿಯಿಂದ ತೆರವು ಮಾಡಲಾಗುವುದು’ ಎಂದು ಹೇಳಿದರು.

ಸನ್ಮಾನ: ಅಯೋಧ್ಯೆಯಲ್ಲಿ 48 ದಿನ ನಡೆಯುವ ಮಂಡಲ ಪೂಜೆಯಲ್ಲಿ ಮಂಗಳವಾದ್ಯ ನುಡಿಸಲಿರುವ ತಂಡದ ನೇತೃತ್ವ ವಹಿಸಿರುವ ರಾಮನಗರದ ಡೋಲು ವಿದ್ವಾನ್ ವಿಜಯ್ ಕುಮಾರ್ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸಮಿತಿಯ ಕುಮಾರಸ್ವಾಮಿ, ಪಿ. ಶಿವಾನಂದ, ಬಿ.ಆರ್. ನಾಗೇಂದ್ರ ಗುಪ್ತ, ಸುಬ್ರಮಣ್ಯ ಐಯ್ಯರ್, ಚಗನ್ ಲಾಲ್, ಆರ್.ವಿ. ಸುರೇಶ್, ಗೂಳಿ ಕುಮಾರ್, ರಾಜು, ಸುದರ್ಶನ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT