ಶುಕ್ರವಾರ, ಆಗಸ್ಟ್ 6, 2021
21 °C
ರಾಮನಗರದಲ್ಲಿ ಅಮ್ಮ-ಮಗನಿಗೆ ಸೋಂಕು; ಮಾಗಡಿಯ ಮೆಕ್ಯಾನಿಕ್‌ ಪೀಡಿತ

ರಾಮನಗರ | ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸೋಮವಾರವೂ ಮೂವರಿಗೆ ಸೋಂಕು ದೃಢಪಟ್ಟಿದೆ.

ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ 48 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಸತ್ತ ನಂತರ ಆ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕಿರುವುದು ಧೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಈತ ಬಿಡದಿಯಲ್ಲಿ ತರಕಾರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು ಸದ್ಯ ಅಂಗಡಿ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಪ್ರವಾಸದ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಅಮ್ಮ-ಮಗನಿಗೆ ಸೋಂಕು: ರಾಮನಗರದ ಟಿಪ್ಪುನಗರದಲ್ಲಿರುವ ತಾಯಿ ಹಾಗೂ ಮಗನಿಗೆ ಕೋವಿಡ್‌ ಸೋಂಕು ತಗುಲಿದೆ. 28 ವರ್ಷದ ಮಗ ಹಾಗೂ 48 ವರ್ಷದ ತಾಯಿ ಸೋಂಕಿನಿಂದ ಬಳಲುತ್ತಿದ್ದಾರೆ. ಯುವಕ ಬೆಂಗಳೂರಿನಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ. ಆತನಲ್ಲಿ ಕಳೆದ 4 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಆ ದಿನ ತಾಯಿ ಹಾಗೂ ಮಗನನ್ನು ಕ್ವಾರೆಂಟೈನ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ಇಬ್ಬರನ್ನೂ ಸದ್ಯ ರಾಮನಗರದ ಕೋವಿಡ್‌ ರೆಫರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಲವರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು, ಸುತ್ತಲಿನ ಪ್ರದೇಶ ಸೀಲ್‌ಡೌನ್‌ಗೆ ಚಿಂತನೆ ನಡೆದಿತ್ತು.

ಮಾಗಡಿಯ ಗಾಡಿವೆಂಕಟಪ್ಪ ರಸ್ತೆಯ 34 ವರ್ಷದ ವ್ಯಕ್ತಿಗೆ ಸೋಮವಾರ ಸೋಂಕು ಧೃಡಪಟ್ಟಿದೆ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಈತ ಮೂರು ದಿನದ ಹಿಂದೆ ತುಮಕೂರು ನಗರದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದ. ಸೋಂಕಿನ ಹಿನ್ನೆಲೆಯಲ್ಲಿ ಆತ ವಾಸಿಸುತ್ತಿದ್ದ ಪ್ರದೇಶವನ್ನು ಸದ್ಯ ಸೀಲ್‌ಡೌನ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ರಾಮನಗರ 9, ಚನ್ನಪಟ್ಟಣ 9, ಮಾಗಡಿ 3, ಕನಕಪುರದಲ್ಲಿ 1, ಹಾಗೂ ಬಿಡದಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು