ಭಾನುವಾರ, ಆಗಸ್ಟ್ 1, 2021
23 °C
ಇದೇ 28ರಿಂದ ದಸರಾ ಹಬ್ಬ ಆಯೋಜನೆ: ಗ್ರಾಹಕರಿಗೆ ವಿಶೇಷ ಆತಿಥ್ಯ

ವಂಡರ್‌ಲಾ: ಹೊಸ ಮನೋರಂಜನಾ ಆಟಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ (ರಾಮನಗರ): ದಸರಾ ಅಂಗವಾಗಿ ಇಲ್ಲಿನ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಹೊಸ ಬಗೆಯ ಅನುಭವ ನೀಡುವ ಎರಡು ರೈಡ್‌ಗಳಿಗೆ ನಟಿ ಹರಿಪ್ರಿಯಾ ಬುಧವಾರ ಚಾಲನೆ ನೀಡಿದರು.

‘ವಂಡರ್‌ಲಾದಲ್ಲಿ ಗ್ರಾಹಕರಿಗೆಂದು ಈಗಾಗಲೇ 64 ಬಗೆಯ ಮನೋರಂಜನಾ ಆಟಗಳಿದ್ದು, ಇದೀಗ ವೇವ್ ರೈಡರ್ ಹಾಗೂ ಡ್ರಾಪ್ ಲೂಪ್‌ ಎಂಬ ಎರಡು ಹೊಸ ಆಟಗಳು ಸೇರ್ಪಡೆ ಆಗಿವೆ. ಈ ಮೂಲಕ ಬೆಂಗಳೂರಿನ ಈ ಪಾರ್ಕ್‌ ದೇಶದಲ್ಲೇ ಅತಿದೊಡ್ಡ ಅಮ್ಯೂಸ್‌ಮೆಂಟ್‌ ಪಾರ್ಕ್‌ ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಚಿಟ್ಟಿಲಪಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಜೋಸೆಫ್‌ ಮಾಹಿತಿ ನೀಡಿ ‘ ಬೆಂಗಳೂರು ಪಾರ್ಕ್‌ಗೆ ಸದ್ಯ ನಿತ್ಯ ಸರಾಸರಿ 3 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಕೊಚ್ಚಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ವಂಡರ್‌ಲಾ ಪಾರ್ಕುಗಳು ಇದ್ದು, ರೆಸಾರ್ಟ್‌ಗಳನ್ನೂ ತೆರೆಯಲಾಗುತ್ತಿದೆ. ಚೆನ್ನೈನಲ್ಲಿ ಪಾರ್ಕ್‌ ನಿರ್ಮಾಣಕ್ಕಾಗಿ ಜಾಗ ಖರೀದಿಸಲಾಗಿದೆ’ ಎಂದರು.

‘ಇಲ್ಲಿನ ಮನೋರಂಜನಾ ಪಾರ್ಕಿನಲ್ಲಿ ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಯಂತ್ರಗಳ ಕಾರ್ಯಕ್ಷಮತೆ ಉತ್ತಮವಾಗಿದೆ. ಈ ಬಗ್ಗೆ ಯಾರೂ ಸಂದೇಹ ಪಡುವ ಹಾಗಿಲ್ಲ’ ಎಂದು ಭರವಸೆ ನೀಡಿದರು.

ದಸರಾ ಹಬ್ಬ: ಇದೇ 28ರಿಂದ ಅಕ್ಟೋಬರ್‌ 8ರವರೆಗೆ ವಂಡರ್‌ಲಾದಲ್ಲಿ ದಸರಾ ಹಬ್ಬದ ಆಚರಣೆ ನಡೆಯಲಿದೆ. ಮೆರವಣಿಗೆ, ಆಹಾರ ಮೇಳ, ಮ್ಯಾಜಿಕ್‌ ಶೋ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಂಡರ್‌ ಕ್ಲಬ್‌ ಕಾರ್ಯಕ್ರಮ: ವಂಡರ್‌ ಕ್ಲಮ್‌ ಸದಸ್ಯತ್ವ ಅಭಿಯಾನ ಆರಂಭಿಸಿದೆ. 3 ಹಾಗೂ 6 ವರ್ಷಗಳ ಅವಧಿಯ ಸದಸ್ಯತ್ವ ಪಡೆಯಬಹುದಾಗಿದ್ದು, ಕಂಪನಿಯ ಪಾರ್ಕ್‌ ಹಾಗೂ ರೆಸಾರ್ಟ್‌ ಪ್ರವೇಶಕ್ಕೆ ವಿಶೇಷ ಸೌಲಭ್ಯ ಸಿಗಲಿದೆ. ಗೋಲ್ಡ್‌ ಕಾರ್ಡ್‌ನ ಬೆಲೆ ₨18,299 ಹಾಗೂ ಡೈಮಂಡ್‌ ಕಾರ್ಡಿನ ಬೆಲೆ ₨33,999ರಿಂದ ಆರಂಭ ಆಗಲಿದೆ ಎಂದರು.

‘ಕಂಪನಿಯು ಸಿಎಸ್‌ಆರ್‌ ಚಟುವಟಿಕೆಗಳಿಗೂ ಆದ್ಯತೆ ನೀಡಿದೆ. ಕೊಪ್ಪಳದಲ್ಲಿ ನೆರೆ ಸಂತ್ರಸ್ಥರಿಗೆ ಅಗತ್ಯ ನೆರವು ಕಲ್ಪಿಸಲಾಗಿದೆ. ಸ್ಥಳೀಯವಾಗಿಯೂ ಶಾಲೆ–ಕಾಲೇಜುಗಳಿಗೆ ಮೂಲ ಸೌಲಭ್ಯಕ್ಕಾಗಿ ಅನುದಾನ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ನಟಿ ಹರಿಪ್ರಿಯಾ ಮಾತನಾಡಿ ‘ಬೆಂಗಳೂರಿಗೆ ಭೇಟಿ ನೀಡುವವರ ಪ್ರವಾಸಿಗರ ಪಟ್ಟಿಯಲ್ಲಿ ವಂಡರ್‌ಲಾ ಹೆಸರು ಇದ್ದೇ ಇರುತ್ತದೆ. ರಂಜನೆಯ ರೋಚಕ ಅನುಭವ ಹೊಂದಲು ಇದು ಹೇಳಿ ಮಾಡಿಸಿದ ತಾಣ. ಇದೀಗ ಇಲ್ಲಿ ರೆಸಾರ್ಟ್‌ ಕೂಡ ಆರಂಭ ಆಗಿದ್ದು, ವಿಹರಿಸುತ್ತ ಕಾಲ ಕಳೆಯಬಹುದು’ ಎಂದು ಹರ್ಷ ವ್ಯಕ್ತಪಡಿಸಿದರು.

ಬೆಂಗಳೂರು ಪಾರ್ಕಿನ ಮುಖ್ಯಸ್ಥ ಎಂ.ಬಿ. ಮಹೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು