ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕೆಲಸಕ್ಕೆ ಮೊದಲ ಆದ್ಯತೆ ನೀಡಿ: ಜಿಲ್ಲಾಧಿಕಾರಿ

ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 27 ಫೆಬ್ರುವರಿ 2024, 5:24 IST
Last Updated 27 ಫೆಬ್ರುವರಿ 2024, 5:24 IST
ಅಕ್ಷರ ಗಾತ್ರ

ರಾಮನಗರ: ‘ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದ್ದು, ಪೂರ್ವಸಿದ್ಧತಾ ಕಾರ್ಯಗಳನ್ನು ತ್ವರಿತವಾಗಿ ಮುಗಿಸಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ದೈನಂದಿನ ಕಚೇರಿ ಕಾರ್ಯಗಳ ಜೊತೆಗೆ ಚುನಾವಣಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಲೋಕಸಭಾ ಚುನಾವಣೆಯು ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ, ಮತಗಟ್ಟೆಗಳಿಗೆ ಮೂಲಸೌಕರ್ಯ ವ್ಯವಸ್ಥೆ, ರ‍್ಯಾಂಪ್ ನಿರ್ಮಾಣ, ಭದ್ರತೆ, ಪೊಲೀಸ್ ಬಂದೋಬಸ್ತ್, ಚೆಕ್ ಪೋಸ್ಟ್ ನಿರ್ಮಾಣ ಕೆಲಸಗಳು ತಡವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.

‘ಚುನಾವಣಾ ಲಿಪಿಕ ಪರಿಕರಗಳು ಹಾಗೂ ಇತರ ವಸ್ತುಗಳ ಖರೀದಿ, ಸಾರಿಗೆ ವ್ಯವಸ್ಥೆ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರಿಗೆ ತರಬೇತಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ ಸೇರಿದಂತೆ ಇತರ ತಯಾರಿಗಳನ್ನು ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾರ್ಯಭಾರ ಹಂಚಿಕೆ ಮಾಡಿ, ನಿಗಾ ವಹಿಸಬೇಕು’ ಎಂದು ಸೂಚಿಸಿದರು.

‘ಚುನಾವಣಾ ಕರ್ತವ್ಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಾದರಿ ನೀತಿ ಸಂಹಿತೆಯು ಅಧಿಸೂಚನೆ ಪ್ರಕಟದ ದಿನಾಂಕದಿಂದ ಚುನಾವಣೆ ಫಲಿತಾಂಶದ ನಂತರವೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

‘ಅನುಮತಿ ಇಲ್ಲದೆ ಯಾವುದೇ ರೀತಿಯ ಸಾರ್ವಜನಿಕ ಸಭೆ–ಸಮಾರಂಭಗಳು ಆಯೋಜನೆಯಾಗದಂತೆ ನೋಡಿಕೊಳ್ಳಬೇಕು. ಅನಿವಾರ್ಯವಾದ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಾಘವೇಂದ್ರ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾಧಿಕಾರಿ
ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾಧಿಕಾರಿ
ಚುನಾವಣಾ ಮಾದರಿ ನೀತಿ ಸಂಹಿತೆ ಯಾವಾಗ ಬೇಕಾದರೂ ಜಾರಿಯಾಗಬಹುದು. ಆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಪೂರ್ವಸಿದ್ಧತೆಯನ್ನು ಈಗಲೇ ಮಾಡಿಕೊಳ್ಳಬೇಕು
– ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾಧಿಕಾರಿ

ಜಾಹೀರಾತು ಮೇಲೆ ನಿಗಾ ಇರಲಿ

‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟಿಸಲು ಸರ್ಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳದಂತೆ ನಿಗಾ ಇಡಬೇಕು. ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಸರ್ಕಾರದ ಅಧೀನದಲ್ಲಿರುವ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಪ್ರಚಾರ ಫಲಕಗಳಲ್ಲಿನ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಚುನಾವಣಾ ಸಭೆಗಳಿಗೆ ಸಂಬಂಧಿಸಿದಂತೆ ಸಕ್ಷಮ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಚಾರ ನಡೆಸುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಮದ್ರನ್ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT