ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿ ರಾಜಕಾರಣದ ಢಾಳ ಛಾಯೆ ಗುರುವಾರ ಸ್ವಾತಂತ್ರ್ಯ ದಿನಾಚರಣೆ ವೇಳೆ ಕಂಡುಬಂತು.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ತಾಲ್ಲೂಕು ಮಟ್ಟದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಹೊಸ ಪದ್ಧತಿಯೊಂದಕ್ಕೆ ನಾಂದಿ ಹಾಡಿದರು.
ಇತ್ತೀಚಿನ ವರ್ಷಗಳಲ್ಲಿ ಶಾಸಕರ ಗೈರು ಹಾಜರಿಯಲ್ಲೇ ನಡೆಯುತ್ತಿದ್ದ ತಾಲ್ಲೂಕಿನ ಸ್ವಾತಂತ್ರ್ಯ ದಿನಾಚರಣೆಗೆ ಖುದ್ದು ಉಪ ಮುಖ್ಯಮಂತ್ರಿ ಹಾಜರಿ ಹೊಸ ರಾಜಕೀಯ ಬೆಳವಣಿಗೆಗಳಿಗೂ ದಿಕ್ಸೂಚಿಯಾಯಿತು.
ಅತ್ತ ಶಿವಕುಮಾರ್ ತವರು ಕ್ಷೇತ್ರ ಕನಕಪುರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿ ಅಚ್ಚರಿ ಮೂಡಿಸಿದರು.
ಮೈತ್ರಿ ಅಭ್ಯರ್ಥಿ ಆಕಾಂಕ್ಷಿ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮ ಮುಗಿಯುವರೆಗೂ ಶಿವಕುಮಾರ್ ಪಕ್ಕ ಕುಳಿತುಕೊಳ್ಳುವ ಮೂಲಕ ಯೋಗೇಶ್ವರ್ ಅವರು ಮೈತ್ರಿ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ಇಂದಿನ ಬೆಳವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.
ಕಾಂಗ್ರೆಸ್ ಹಿಡಿತವಿರುವ ಹಾರೋಹಳ್ಳಿ ತಾಲ್ಲೂಕಿನ ಜೊತೆಗೆ ಕನಕಪುರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಂಸದ ಡಾ. ಮಂಜುನಾಥ್ ಅವರು ಕನಕಪುರದಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ. ಇದು ಕನಕಪುರದಲ್ಲಿ ನಿಧಾನವಾಗಿ ಮೈತ್ರಿ ಬಲ ಹೆಚ್ಚಿಸಿಕೊಳ್ಳುವ ತಂತ್ರವಾಗಿದೆ ಎಂದು ಸ್ಥಳೀಯರು ವಿಶ್ಲೇಷಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.