ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಇಳುವರಿ ಕುಸಿತದ ಆತಂಕ

ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾದರೆ ಕೀಟದ ಪ್ರಭಾವ ಹೆಚ್ಚು
Last Updated 4 ಆಗಸ್ಟ್ 2019, 13:21 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆ ಗೂಡಿನ ಧಾರಣೆ ಇಲ್ಲದೇ ಕಂಗಾಲಾಗಿರುವ ರೇಷ್ಮೆ ಕೃಷಿಕರು, ಹಿಪ್ಪು ನೇರಳೆ ಕೀಟ ಬಾಧೆಯಿಂದಾಗಿ ರೋಸಿ ಹೋಗಿದ್ದಾರೆ. ಇನ್ನೊಂದೆಡೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಕೀಟ ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

ಕೀಟ ಬಾಧೆಯಿಂದ ಶೇ 40ರಷ್ಟು ರೇಷ್ಮೆ ಗೂಡಿನ ಉತ್ಪಾದನೆ ಕುಸಿಯುತ್ತದೆ ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಫೈಟೋಟಾರ್ಸ ನೋಮಸ್ ಲಾಟಸ್ ಎಂಬ ಕೀಟ ಹಿಪ್ಪು ನೇರಳೆ ಗಿಡದ ಎಲೆಗಳನ್ನು ನಾಶ ಮಾಡುತ್ತಿವೆ. ಈಗಾಗಲೇ ಈ ಕೀಟ ಜಿಲ್ಲಾದ್ಯಂತ ಹರಡಿದೆ. ಈ ಕೀಟ ಬಾಧೆಯ ನಿವಾರಣೆಗೆ ಔಷಧಗಳು ಇವೆಯಾದರೂ ಅದನ್ನು ಬಳಸಿದರೆ ಹತ್ತಿರದಲ್ಲಿರುವ ಆರೋಗ್ಯವಂತ ರೇಷ್ಮೆ ಹುಳುವಿನ ನಾಶಕ್ಕೂ ಕಾರಣವಾಗಲಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೇಷ್ಮೆ ಇಲಾಖೆಯ ಅಧಿಕಾರಿಗಳು ವಿಜ್ಞಾನಿಗಳ ಮೊರೆ ಹೋಗಿದ್ದಾರೆ.

ಹಿಪ್ಪು ನೇರಳೆ ತೋಟ ಅನೇಕ ಕೀಟಗಳ ಬಾಧೆಗೆ ಸಿಲುಕುತ್ತದೆ. ಸಾಮಾನ್ಯವಾಗಿ ಜೇಡ ಗುಂಪಿಗೆ ಸೇರಿದ ಫೈಟೊ ಟಾರ್ಸನೋಮಸ್ ಲಾಟಸ್ ಕೀಟ ಪ್ರಸಕ್ತ ವರ್ಷದಲ್ಲಿ ಹೆಚ್ಚು ಬಾಧಿಸುತ್ತಿದೆ. ರೇಷ್ಮೆ ಬೆಳೆಗಾರರಿಗೆ ನಷ್ಟವನ್ನು ಉಂಟು ಮಾಡುತ್ತಿದೆ. ಈ ಕೀಟಗಳು ಹಿಪ್ಪು ನೇರಳೆಯ ಎಲೆಗಳ ರಸ ಹೀರಿಕೊಳ್ಳುವುದರಿಂದ ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ಗುಣಮಟ್ಟ ಕುಂಠಿತಗೊಳ್ಳುತ್ತವೆ. ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾದರೆ, ಈ ಕೀಟ ತನ್ನ ಪ್ರಭಾವ ಬೀರುವುದು ಹೆಚ್ಚು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕೀಟ ಬಾಧೆಗೆ ತುತ್ತಾಗಿರುವ ತೋಟಗಳ ಎಲೆಗಳ ಮೇಲೆ ಮತ್ತು ಕೆಳ ಭಾಗಗಳಲ್ಲಿ ಅಧಿಕವಾಗಿರುತ್ತದೆ. ಕೀಟಗಳು ಸೊಪ್ಪಿನ ರಸ ಹೀರಿ ಕೆಳಭಾಗದ ಎಲೆಯ ನಡುವೆ ನುಸಿಯು ಹೊರಚೆಲ್ಲಿದ ಮೇಣವು ಒಂದು ರೀತಿಯಲ್ಲಿ ಚಾಪೆಯಂತಿರುತ್ತವೆ. ಎಲೆಗಳ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಎಲೆಗಳು ಚಿಕ್ಕದಾಗಿ ಮೇಲ್ಮುಖವಾಗಿ ಮುದುಡಿ ದೋಣಿಯ ಆಕಾರವಾಗಿ ಬೆಳವಣಿಗೆಯು ಕುಂಠಿತಗೊಂಡು ಕ್ರಮೇಣ ಎಲೆ ಪೂರ್ತಿ ಕಂದು ಬಣ್ಣಕ್ಕೆ ತಿರುಗಿ ಎಲೆಯು ಒಣಗಿ ಉದುರಿ ಹೋಗುತ್ತದೆ.

ಹಿಪ್ಪು ನೇರಳೆ ತೋಟದಲ್ಲಿ ಕೀಟ ಬಾಧೆಗೆ ಮ್ಯಾಜಿಸ್ಟರ್‌ ಅಥವಾ ಉಮೈಟ್ ಎಂಬ ಕೀಟ ನಾಶಕವನ್ನು ಶೇ 02 ಪ್ರಮಾಣದಲ್ಲಿ (ಅಂದರೆ 2 ಮಿಲೀ ಉಮೈಟ್ ಅಥವಾ ಮ್ಯಾಜಿಸ್ಟರ್ ಪ್ರತಿ ಲೀಟರ್‌ ನೀರಿಗೆ ಬೆರಸುವುದು) ದ್ರಾವಣವನ್ನು ಸಿದ್ಧಪಡಿಸಿಕೊಂಡು ಎಲೆಗಳ ಮೇಲ್ಭಾಗ ಮತ್ತು ಕೆಳಭಾಗವು ಸಂಪೂರ್ಣವಾಗಿ ನೆನೆಯುವಂತೆ ಸಿಂಪಡಿಸಬೇಕಾಗಿದೆ. ಆದರೆ, ಈ ದ್ರಾವಣ ಬಳಸಿದ ತೋಟಗಳ ಅಕ್ಕಪಕ್ಕದಲ್ಲಿ ರೇಷ್ಮೆ ಹುಳು ಇದ್ದರೆ ಅದರ ಮೇಲೆ ಪರಿಣಾಮ ಬೀರಿ ಹುಳು ನಾಶವಾಗುವ ಆತಂಕವಿದೆ.

ಹೀಗಾಗಿ ಭಾದಿತ ಹಿಪ್ಪು ನೇರಳೆ ತೋಟ ಸ್ವತಂತ್ರವಾಗಿದ್ದರೆ ಮಾತ್ರ ಈ ದ್ರಾವಣವನ್ನು ಬಳಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಹಿಪ್ಪುನೇರಳೆ ಬೆಳೆಯನ್ನು ಬಾದಿಸುತ್ತಿರುವ ಕೀಟನಾಶಕ್ಕೆ ವಿಜ್ಞಾನಿಗಳಿಗೆ ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ಎನ್.ಬಿ.ಎ.ಐ.ಐ)ಗೆ ಪತ್ರ ಬರದು ಜೈವಿಕ ನಿಯಂತ್ರಣ ಕೀಟದ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಎಲೆ ಸುರಳಿ ಕೀಟ ಬಾಧಿಸಿದಾಗ ಟ್ರೈಕೋಕಾರ್ಡ್ ಎಂಬ ಕೀಟವನ್ನು ಬಳಸಿಕೊಳ್ಳಲಾಗಿತ್ತು. ಈ ಕೀಟ ಎಲೆ ಸುರುಳಿ ಕೀಟವನ್ನು ತಿಂದು ನಿಯಂತ್ರಣ ಸಾಧಿಸಲಾಗಿತ್ತು. ಇದೇ ರೀತಿಯಲ್ಲಿ ಪೈಟೋಟಾರ್ಸನೋಮಸ್ ಲಾಟಸ್ ಕೀಟ ನಿಯಂತ್ರವನ್ನು ಜೈವಿಕ ವಿಧಾನದಲ್ಲೇ ನಿಯಂತ್ರಿಸಲು ಮನವಿ ಮಾಡಲಾಗಿದೆ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT