ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪಾಪುರ: ಪ್ರವಾಸಿ ತಾಣವಾಗಿ ಅಭಿವೃದ್ಧಿ, ಕೆರೆ ಅಭಿವೃದ್ಧಿಗೂ ಆದ್ಯತೆ

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭರವಸೆ:
Last Updated 22 ಮೇ 2020, 15:25 IST
ಅಕ್ಷರ ಗಾತ್ರ

ಮಾಗಡಿ: ಕೆಂಪಾಪುರದಲ್ಲಿ ಕೆಂಪೇಗೌಡರ ಚಾರಿತ್ರಿಕ ಸ್ಮಾರಕವನ್ನು ವಿಶ್ವದರ್ಜೆ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು ₹35ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಶುಕ್ರವಾರ ಕೆಂಪಾಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆಂಪಾಪುರ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಕೆಂಪೇಗೌಡ ವಂಶಜರ ಜನೋಪಯೋಗಿ ಸಾಧನೆಗಳನ್ನು ಮುಂದಿನ ತಲೆಮಾರಿಗೂ ತಿಳಿಸುವಂತೆ ಮಾಡಬೇಕಿದೆ. ಕೆಂಪಾಪುರದಲ್ಲಿ 8 ಎಕರೆ ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಪರಿಹಾರ ನೀಡಿದ ಕೂಡಲೇ ತ್ವರಿತವಾಗಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಸಮಾಧಿ ಸ್ಮಾರಕ ಅಭಿವೃದ್ಧಿ: ಕೆಂಪಾಪುರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೆ ಸಿಡಾಕ್‌ ಸಂಸ್ಥೆ ಸಮಗ್ರ ಯೋಜನಾ ವರದಿ ನೀಡಿದೆ. ಜೂನ್‌ 27ರಂದು ಕೆಂಪೇಗೌಡ ಜಯಂತಿ ಇದೆ. ಅಷ್ಟರೊಳಗೆ ಭೂಮಿ ಕೆಂಪೇಗೌಡ ಪ್ರಾಧಿಕಾರದ ವಶಕ್ಕೆ ಬಂದರೆ, ಜಯಂತಿ ದಿನವೇ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಮುಂದಿನ ವರ್ಷ ಕೆಂಪೇಗೌಡ ಜಯಂತಿ ಕೆಂಪಾಪುರದಲ್ಲಿಯೇ ನಡೆಸುವ ಉದ್ದೇಶವಿದೆ. ಚಾರಿತ್ರಿಕ ದಾಖಲೆಗಳ ಪ್ರಕಾರ ನಾಡಿನ 46 ಕಡೆ ಕೆಂಪೇಗೌಡರ ಸ್ಮಾರಕಗಳಿವೆ. ಅಷ್ಟೂ ತಾಣಗಳನ್ನು ಅನುಸಂಧಾನಗೊಳಿಸಿ ಅಭಿವೃದ್ಧಿಗೊಳಿಸುವುದು ಸರ್ಕಾರದ ಆಶಯ ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಪ್ರತಿಮೆ: ಬೆಂಗಳೂರು ವಿಮಾನ ನಿಲ್ದಾಣದ ಮುಂದೆ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲು ₹66 ಕೋಟಿ ವೆಚ್ಚದ ಯೋಜನೆಗೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದರು.

ಶಾಸಕ ಎ.ಮಂಜುನಾಥ ಮಾತನಾಡಿ, ಕೆಂಪಾಪುರದ ರೈತರಿಂದ ವಶಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಿ ಪುನರ್‌ವಸತಿಗೆ ಅನುಕೂಲ ಕಲ್ಪಿಸಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಎಂ.ಎಸ್‌.ಅರ್ಚನಾ, ಜಿ.ಪಂ.ಸಿಇಒ ಇಕ್ರಂ, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ,ಪ್ರದೀಪ್‌, ಚಿಕ್ಕಮುದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ರಾಜಣ್ಣ, ಉಪಾಧ್ಯಕ್ಷೆ ಗಂಗಮ್ಮನರಸಿಂಹಮೂರ್ತಿ, ಕೆಂಪಾಪುರ ಸಿಂಗ್ರಿಗೌಡ, ನಟರಾಜ್‌, ದೊಡ್ಡಸೋಮನಹಳ್ಳಿ ಎಂ.ರಾಮಣ್ಣ, ತಿಪ್ಪಸಂದ್ರ ವೆಂಕಟೇಶ್‌, ಚಿಕ್ಕಕಲ್ಯದ ಶ್ರೀಧರ್‌, ಹನುಮಂತಣ್ಣ, ಪಾಪಣ್ಣ, ರೇವಣ್ಣ, ಬಿಜೆಪಿ ಮುಖಂಡರಾದ ರಂಗಧಾಮಯ್ಯ, ಹೊಸಪೇಟೆ ಶಂಕರ್‌, ಬಾಲಾಜಿ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ, ಸರ್ಕಲ್‌ ಇನ್‌ ಸ್ಪೆಕ್ಟರ್‌ ಬಿ.ಎಸ್‌.ಮಂಜುನಾಥ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಟಿ.ವೆಂಕಟೇಶ್‌, ಮಂಜುನಾಥ, ಎನ್‌.ಸುರೇಶ್‌ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT