ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಂಬರೀಕರಣಕ್ಕೆ ಚಾಲನೆ, ಚಿತಾಗಾರ ಉದ್ಘಾಟನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಚಾಲನೆ
Published 15 ಮಾರ್ಚ್ 2024, 5:30 IST
Last Updated 15 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಅವರು ಗುರುವಾರ ಚಾಲನೆ ನೀಡಿದರು. ಚುನಾವಣಾ ಪ್ರಚಾರ ಕಾರ್ಯದ ಜೊತೆ ಜೊತೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಿದ್ಯುತ್ ಚಿತಾಗಾರ ಉದ್ಘಾಟನೆ, ನೂತನ ಶಾಲಾ ಕಟ್ಟಡ ಹಾಗೂ ಸೋಲಾರ್ ದೀಪಗಳನ್ನು ಉದ್ಘಾಟಿಸಿದರು.

ರಾಮನಗರ ಹೊರವಲಯದ ಬಸವನಪುರದಿಂದ ಚನ್ನಪಟ್ಟಣ ತಾಲ್ಲೂಕಿನ ಮಳೂರುವರೆಗೆ 21.13 ಕಿ.ಮೀ. ಉದ್ದದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ₹35 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣಕ್ಕೆ ಸುರೇಶ್ ಚಾಲನೆ ನೀಡಿದರು. ನಗರದ ಐಜೂರು ವೃತ್ತದಲ್ಲಿ ಸಂಜೆ  ನಗರಸಭೆ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಸಾಂಕೇತಿಕವಾಗಿ ರಸ್ತೆಗೆ ಡಾಂಬರು ಹಾಕಿದರು.

ಬಳಿಕ, ನಗರದ ಎಪಿಎಂಸಿ ವೃತ್ತದ ಬಳಿ ಇರುವ ಸ್ಮಶಾನದಲ್ಲಿ ನಿರ್ಮಿಸಿರುವ ವಿದ್ಯುತ್ ಚಿತಾಗಾರವನ್ನು ಉದ್ಘಾಟಿಸಿದರು. ಚಿತಾಗಾರದ ಒಳಾಂಗಣವನ್ನು ವೀಕ್ಷಿಸಿದ ಸುರೇಶ್, ಕಾರ್ಯವೈಖರಿಯನ್ನು ಪರಿಶೀಲಿಸಿದರು. ಇದರೊಂದಿಗೆ, ಎರಡು ವರ್ಷದಿಂದ ಉದ್ಘಾಟನೆ ಕಾಣದೆ ನನೆಗುದಿಗೆ ಬಿದ್ದಿದ್ದ ಚಿತಾಗಾರವು ಸಾರ್ವಜನಿಕರ ಬಳಕೆಗೆ ಮುಕ್ತವಾಯಿತು.

ಶಾಸಕ‌ ಎಚ್.ಎ. ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್ ಮಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಪೌರಾಯುಕ್ತ ಎಲ್. ನಾಗೇಶ್, ಮಾಜಿ ಶಾಸಕ ಕೆ. ರಾಜು, ಮುಖಂಡರಾದ ಕೆ. ಶೇಷಾದ್ರಿ ಶಶಿ, ಕೆ. ರಮೇಶ್, ಪಿ. ನಾಗರಾಜು, ಅಜ್ಮತ್ ಉಲ್ಲಾಖಾನ್, ‌ಬಿ.ಸಿ. ಪಾರ್ವತಮ್ಮ, ಮುತ್ತುರಾಜು, ಗುರುಪ್ರಸಾದ್, ಅನಿಲ್ ಜೋಗಿಂದರ್, ಸಿಎನ್ಆರ್‌ ವೆಂಕಟೇಶ್, ಬಾಬು, ನಾಗಮ್ಮ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT